ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಲ್ಲಿ ಇಂದು ಎಲ್ಲೆಲ್ಲೂ ಹಬ್ಬದ ವಾತಾವರಣ... ಕಾರಣ ಆನೇಕಲ್ ಅಧಿದೈವ ಶ್ರೀ ತಿಮ್ಮರಾಯ ಸ್ವಾಮಿ ಬ್ರಹ್ಮರಥೋತ್ಸವ ಇಂದು ವಿಜೃಂಭಣೆಯಿಂದ ನೆರವೇರಿತು.
ಸಾಕಷ್ಟು ವೈಶಿಷ್ಟ್ಯಗಳ ಶ್ರೀ ತಿಮ್ಮರಾಯಸ್ವಾಮಿ ಬ್ರಹ್ಮರಥೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತಾದಿಗಳು ಆಗಮಿಸಿದ್ದರು. 'ಗೋವಿಂದ, ಗೋವಿಂದ' ನಾಮಸ್ಮರಣೆಯೊಂದಿಗೆ ಶ್ರೀನಿವಾಸನ ದರ್ಶನ ಪಡೆದರು.
ಮತ್ತೊಂದೆಡೆ ಅರವಂಟಿಕೆಗಳಿಂದ ಮಜ್ಜಿಗೆ ವಿತರಣೆ ಕಂಡುಬಂತು. ಯುಗಾದಿ ನಂತರ 7 ದಿನಕ್ಕೆ ಸರಿಯಾಗಿ ಆನೇಕಲ್‍ನ ಐತಿಹಾಸಿಕ ಶ್ರೀ ತಿಮ್ಮರಾಯಸ್ವಾಮಿ ಬ್ರಹ್ಮ ರಥೋತ್ಸವ ನಡೆಯುತ್ತದೆ.
19ನೇ ಶತಮಾನದಲ್ಲಿ ತಿಮ್ಮೇಗೌಡ ಎಂಬ ಅರಸ ಆಳ್ವಿಕೆ ಮಾಡುತ್ತಿದ್ದ. ರಾತ್ರಿ ಕನಸಿನಲ್ಲಿ ಶ್ರೀ ತಿಮ್ಮರಾಯ ಸ್ವಾಮಿ ಬಂದು ತಾನು ಇಲ್ಲಿ ನೆಲೆಸುವುದಾಗಿ ಹೇಳಿ ತನಗೆ ಮಂಟಪ ಕಟ್ಟಿಸುವಂತೆ ಹೇಳಿದ್ದರು.
ಬಳಿಕ ಅರಸ ಇಲ್ಲಿ ದೇವಾಲಯ ನಿರ್ಮಿಸಿದ. ಇದೇ ದೇವಾಲಯ ಜೀರ್ಣೋದ್ಧಾರಗೊಂಡು ಭಕ್ತರ ಅಭೀಷ್ಟ ಈಡೇರಿಸುತ್ತಿದೆ.
ಈ ಬ್ರಹ್ಮ ರಥೋತ್ಸವದ ಪ್ರಮುಖ ಆಕರ್ಷಣೆಯೆಂದರೆ 100 ಅಡಿ ಎತ್ತರದ ತೇರಿನಲ್ಲಿ ವಿಶೇಷವಾಗಿ ತಯಾರಿಸಿರುವ ದೇವರ ರಥ. ಶ್ರೀ ತಿಮ್ಮರಾಯಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ಇರಿಸಿ, ದೇವಸ್ಥಾನಕ್ಕೆ ಪ್ರದಕ್ಷಿಣೆ ಮಾಡುತ್ತಾರೆ.
ಭಕ್ತರು ರಥಕ್ಕೆ ಬಾಳೆಹಣ್ಣು, ಮೆಣಸು, ಏಲಕ್ಕಿಯನ್ನು ಅರ್ಪಿಸಿ ಹರಕೆ ಹೊತ್ತರೆ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು 'ಗೋವಿಂದ, ಗೋವಿಂದ' ನಾಮಸ್ಮರಣೆಯೊಂದಿಗೆ ದೇವರ ತೇರನ್ನು ಎಳೆದರು.
- ಹರೀಶ್ ಗೌತಮನಂದ, 'ಪಬ್ಲಿಕ್ ನೆಕ್ಸ್ಟ್' ಆನೇಕಲ್
Kshetra Samachara
09/04/2022 11:17 am