ಮೈಸೂರು: ಕನ್ನಡ ನಾಡಿನ ಜನತೆಗೆ ತಾಯಿ ಚಾಮುಂಡೇಶ್ವರಿ ಸಕಲ ಮಂಗಳವನ್ನುಂಟು ಮಾಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಬಸವರಾಜ ಬೊಮ್ಮಾಯಿ ಅವರು ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಮೈಸೂರು ದಸರಾ ಈ ಬಾರಿ ಅದ್ದೂರಿ, ಅರ್ಥಪೂರ್ಣವಾಗಿ ಯಶಸ್ವಿಯಾಗಿದೆ. ಬಹಳ ದೊಡ್ಡ ಪ್ರಮಾಣದಲ್ಲಿ ಜನರು ಸೇರಿ ದಸರಾ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸಂಸತ್ ಸದಸ್ಯರು ಯೋಜನಾಬದ್ಧವಾಗಿ ಹಬ್ಬವನ್ನು ಅತ್ಯಂತ ಯಶಸ್ವಿಯಾಗಿ ಆಚರಣೆ ಮಾಡಿದ್ದಾರೆ. ಅವರಿಗೆ ಮತ್ತು ನಾಡಿನ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ನಾಳೆ ಆಯುಧ ಪೂಜೆ, ಜಂಬೂ ಸವಾರಿ ನಡೆಯಲಿದೆ. ಕೋವಿಡ್ ಕಾರಣದಿಂದಾಗಿ ನಮ್ಮ ಗೌರವಾನ್ವಿತ ರಾಜ್ಯಪಾಲರು ಭಾಗವಹಿಸುತ್ತಿಲ್ಲ ಎಂದು ತಿಳಿಸಿದರು.
ಸರ್ಕಾರಿ ನೌಕರರಿಗೆ ಏಳನೇ ಆಯೋಗದ ವೇತನ ಸೇರಿದಂತೆ ಯಾವುದೇ ವಿಚಾರಗಳ ಬಗ್ಗೆ ಇವತ್ತು ಮಾತನಾಡುವುದಿಲ್ಲ. ಇವತ್ತು ಹಬ್ಬದ ವಾತಾವರಣವಿದೆ. ನಾಡಿನ ಜನರು ಆನಂದದಿಂದ ದಸರಾ ಹಬ್ಬವನ್ನು ಆಚರಣೆ ಮಾಡಲಿ ಎಂದು ಸಿಎಂ ಬೊಮ್ಮಾಯಿ ಕೋರಿದರು.
Kshetra Samachara
04/10/2022 07:38 pm