ಬೆಂಗಳೂರು: ಜಾತಿ, ಮತ, ಪಂಥ, ಧರ್ಮಗಳ ಕಟ್ಟುಗಳನ್ನು ಮೀರಿ ಏಕಸೂತ್ರದಲ್ಲಿ ಎಲ್ಲರನ್ನೂ ಒಂದು ಮಾಡುವ ಶಕ್ತಿ ಮಾತೃಭಾಷೆಗೆ ಇದೆ. ಈ ಭಾಷಾ ಬಂಧನಕ್ಕೆ ಪ್ರಪಂಚದಲ್ಲಿ ಎಲ್ಲರನ್ನೂ ಒಂದು ಮಾಡುವ ಶಕ್ತಿ ಇದೆ” ಎಂದು ಹೆಮ್ಮೆಯ ಕನ್ನಡಿಗ, ಕೆನಡಾ ಸಂಸದ ಶ್ರೀ ಚಂದ್ರ ಆರ್ಯ ಹೇಳಿದರು.
ಬುಧವಾರ ಚಂದ್ರ ಆರ್ಯ ಅವರು ಕನ್ನಡ ಸಾಹಿತ್ಯ ಪರಿಷತ್ತಿಗೆ ಭೇಟಿ ನೀಡಿ, ಕನ್ನಡಿಗರ ಅಸ್ಮಿತೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಪಡೆದುಕೊಂಡರು. ಅವರ ಜೊತೆ ಅವರ ಶ್ರೀಮತಿ ಸಂಗೀತಾ ಗಾಯತ್ರಿ, ಸಹೋದರ ಶ್ರೀನಿವಾಸ್ ಸಹ ಸದಸ್ಯತ್ವ ಪಡೆದುಕೊಂಡರು.
ಪಂಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಪರಿಷತ್ತಿನ ಕಾರ್ಯಚಟುವಟಿಕೆಗಳ ಕುರಿತು ಚಂದ್ರ ಆರ್ಯರಿಗೆ ಸಂಪೂರ್ಣ ಮಾಹಿತಿ ನೀಡಿದರು.
ನಂತರ ಮಾತನಾಡಿದ ಚಂದ್ರ ಆರ್ಯ ಅವರು, “ಕನ್ನಡ ಸಾಹಿತ್ಯ ಪರಿಷತ್ತು ಕೆಲ ಚಟುವಟಿಕೆಗಳಿಗೆ, ಕೆಲವರಿಗೆ ಮಾತ್ರ ಸೀಮಿತವಾಗದೆ ಎಲ್ಲ ಕನ್ನಡಿಗರನ್ನೂ ಒಳಗೊಳ್ಳುತ್ತಿರುವುದು ಸಂತಸದ ಸಂಗತಿ. ಇತ್ತೀಚಿನ ದಿನಗಳಲ್ಲಿ ನಾಡೋಜ ಡಾ. ಮಹೇಶ ಜೋಶಿ ಅವರ ನೇತ್ರತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಜನಸಾಮಾನ್ಯರ ಪರಿಷತ್ತಾಗುತ್ತಿದೆ. ಇಲ್ಲಿ ನಡೆಯುತ್ತಿರುವ ಎಲ್ಲಾ ಕಾರ್ಯಚಟುವಟಿಕೆಗಳು ಕನ್ನಡ-ಕನ್ನಡಿಗ-ಕರ್ನಾಟಕವನ್ನು ಗಟ್ಟಿಗೊಳಿಸುವಂಥದ್ದು” ಎಂದರು.
ನನ್ನ ತಂದೆಯವರು ತಮ್ಮ ಸರಕಾರಿ ಸೇವೆಯಲ್ಲಿರುವಾಗ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ರೂಪಿಸುವಲ್ಲಿ ಕಾರ್ಯಯೋಜನೆಯನ್ನು ಕೈಗೊಂಡಿದ್ದರು” ಎಂಬುದನ್ನು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
“ಕೆನಡಾದಲ್ಲಿರುವ ಕನ್ನಡಿಗರನ್ನು ಒಟ್ಟುಗೂಡಿಸಿ ಪರಿಷತ್ತಿನ ಘಟಕವನ್ನು ರಚಿಸಿ ಅದನ್ನು ಮುನ್ನಡೆಸುವ ಮಹತ್ವದ ಜವಾಬ್ದಾರಿಯನ್ನು ನಾಡೋಜ ಡಾ. ಮಹೇಶ ಜೋಶಿ ಅವರು ನೀಡಿದ್ದಾರೆ. ಅದನ್ನು ನಾನು ನನ್ನ ಕರ್ತವ್ಯ ಎಂದು ನಿಭಾಯಿಸುತ್ತೇನೆ” ಎಂಬ ಭರವಸೆಯನ್ನು ಚಂದ್ರ ಆರ್ಯ ನೀಡಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗಶೆಟ್ಟಿ, ಗೌರವ ಕೋಶಾಧ್ಯಕ್ಷ ಬಿ.ಎಮ್. ಪಟೇಲ್ಪಾಂಡು, ಕನ್ನಡಪರ ಹೋರಟಗಾರ ಸತೀಶ ಗೌಡ ಅವರು ಉಪಸ್ಥಿತರಿದ್ದರು.
PublicNext
14/07/2022 11:15 am