ಬೆಂಗಳೂರು: ಅದೆಷ್ಟೋ ಜನರು ಹಗಲೂ ರಾತ್ರಿ ಕಷ್ಟಪಟ್ಟು ಓದಿ ಒಂದು ಡಿಗ್ರಿ ಪಡೆಯುತ್ತಾರೆ. ಆದ್ರೆ, ಅಡ್ಡದಾರಿಯಲ್ಲಿ ಡಿಗ್ರಿ ಸರ್ಟಿಫಿಕೇಟ್ ಕೊಟ್ಟು ಯುವ ಪೀಳಿಗೆಯನ್ನೇ ಹಾಳುಗೆಡವುವ ನಯವಂಚಕರು ಹುಟ್ಟಿಕೊಂಡಿದ್ದಾರೆ. ಹೌದು... ಅಯೂಬ್ ಪಾಷಾ @ ಅಯೂಬ್ ಹಾಗೂ ಖಲೀಲ್ ಉಲ್ಲಾಬೇಗ್ @ ಖಲೀಲ್ ಇವರನ್ನು ಸಂಪರ್ಕಿಸಿದ್ರೆ ಸಾಕು, ಯಾವುದೇ ಡಿಗ್ರಿ ಸರ್ಟಿಫಿಕೇಟ್ ಬೇಕಾದ್ರೂ ರೆಡಿ ಮಾಡಿ ಕೊಡ್ತಿದ್ರು!
ಅಸಲಿ ಸರ್ಟಿಫಿಕೇಟ್ ಗೆ ಸೆಡ್ಡು ಹೊಡೆವ ರೀತಿ ನಕಲಿ ಸರ್ಟಿಫಿಕೇಟ್ ಮಾಡಿ ಕೊಡ್ತಿದ್ದ ಈ ವಂಚಕರನ್ನು ಇದೀಗ
ಶೇಷಾದ್ರಿಪುರಂ ಪೊಲೀಸ್ ಇನ್ ಸ್ಪೆಕ್ಟರ್ ರವಿ ನೇತೃತ್ವದ ತಂಡ ಹೆಡೆಮುರಿ ಕಟ್ಟಿದೆ. ಫೇಕ್ ಮಾರ್ಕ್ ಕಾರ್ಡ್ ಮಾಡ್ಕೊಡ್ತಿದ್ದಾರೆಂಬ ಮಾಹಿತಿ ಬಂದ ಹಿನ್ನಲೆ ಶೇಷಾದ್ರಿಪುರಂನ ಮನೆ ಮೇಲೆ ದಾಳಿ ನಡೆಸಲಾಗಿತ್ತು.
ದಾಳಿ ವೇಳೆ ಒಂದು ಕ್ಷಣ ಪೊಲೀಸರಿಗೂ ಕನ್ಪ್ಯೂಸ್ ಆಗಿರಬಹುದು . ಯಾಕೆಂದರೆ ಅಲ್ಲಿ ಅಸಲಿಯನ್ನೇ ಅಚ್ಚೊತ್ತಿದ ರೀತಿಯಲ್ಲಿ 38 ಸರ್ಟಿಫಿಕೇಟ್ ಗಳು ಸಿಕ್ಕಿದ್ವು. ಈ 38 ಸರ್ಟಿಫಿಕೇಟ್ ಗಳಲ್ಲಿ ಹತ್ತನೇ ತರಗತಿಯ ಸರ್ಟಿಫಿಕೇಟ್, ಡಿಗ್ರಿ ಸರ್ಟಿಫಿಕೇಟ್, ಅದಕ್ಕಿಂತ ಹೆಚ್ಚಾಗಿ ಬೆಂಗಳೂರು ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಗಳೂ ಸಿಕ್ಕಿತ್ತು!
ಒರಿಜಿನಲ್ ಸರ್ಟಿಫಿಕೇಟ್ ಹಾಗೂ ನಕಲಿ ಸರ್ಟಿಫಿಕೇಟ್ ನ್ನ ಅಕ್ಕಪಕ್ಕದಲ್ಲಿಟ್ಟರೆ ಗೊತ್ತೇ ಆಗೋದಿಲ್ಲ. ಇನ್ನು ಇಂತಹ ಸರ್ಟಿಫಿಕೇಟ್ ಗಳನ್ನ ಕೊಂಡುಕೊಳ್ಳುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಆಯಾ ಡಿಗ್ರಿಗಳ ಗ್ರೇಡ್ ಮೇಲೆ ಹಣ ನೀಡಬೇಕಾಗುತ್ತೆ. ಒಂದೊಂದಕ್ಕೆ ಹತ್ತರಿಂದ 20 ಸಾವಿರದ ವರೆಗೂ ಚಾರ್ಜ್ ಮಾಡ್ತಾರೆ. ಅಬ್ಬಬ್ಬಾ ಅಂದ್ರೆ 30 ಸಾವಿರದಲ್ಲಿ ಸರ್ಟಿಫಿಕೇಟ್ ನಿಮ್ಮ ಕೈ ಸೇರುತ್ತೆ!
ಇನ್ನು, ಚಿಕ್ಕಬಳ್ಳಾಪುರ ಮೂಲದ ಆರೋಪಿಗಳು ಶೇಷಾದ್ರಿಪುರಂನಲ್ಲಿ ವಾಸ ಮಾಡಿಕೊಂಡು ಇಲ್ಲಿನ ಸ್ಥಳೀಯ ಹುಡುಗರ ಬಳಿ ದಾಖಲೆಗಳನ್ನ ಕಲೆ ಹಾಕುತ್ತಿದ್ರು. ಇವರಿಂದ ಆರು ಮಂದಿ ಮಾರ್ಕ್ಸ್ ಕಾರ್ಡ್ ಗಳನ್ನ ಪಡೆದುಕೊಂಡಿದ್ದವರೂ ಕೂಡ ಪತ್ತೆಯಾಗಿದ್ದು ಅವರ ವಿಚಾರಣೆಯೂ ಮುಂದುವರೆದಿದೆ.
PublicNext
24/08/2022 07:42 pm