ಬೆಂಗಳೂರು: ಬ್ಲಡ್ ಕ್ಯಾನ್ಸರ್ ಗೆ ಹೆದರಿ ಸಾವಿನ ದಾರಿ ಹಿಡಿದಿದ್ದ ಆ ವ್ಯಕ್ತಿ ಸಾವಿಗೂ ಮುನ್ನ ಅದೊಂದು ದುರಾಲೋಚನೆ ಮಾಡಿದ್ದ. ಆತ ಎಸಗಿದ ದುಷ್ಕೃತ್ಯಕ್ಕೆ ಪತ್ನಿ-ಮಗು ಇಬ್ರೂ ಮಸಣ ಸೇರಿದ್ದಾರೆ!
ಇಂದಿನ ಶ್ರೀಕೃಷ್ಣ ಜನ್ಮಾಷ್ಟಮಿಗೆ ಮಗನನ್ನು ಕೃಷ್ಣನ ವೇಷದಲ್ಲಿ ನೋಡಲು ಬಟ್ಟೆ ಕೂಡ ಖರೀದಿಸಿಟ್ಟಿದ್ರು. ಆದ್ರೆ, ಆ ಕನಸು ಕನಸಾಗಿಯೇ ಉಳಿದುಬಿಟ್ಟಿದೆ.
ನಿನ್ನೆ ಕೋಣನಕುಂಟೆಯಲ್ಲಿ ಬ್ಲಡ್ ಕ್ಯಾನ್ಸರ್ ಗೆ ಹೆದರಿ ಇಡೀ ಕುಟುಂಬವನ್ನು ಸಾವಿನ ದವಡೆಗೆ ದೂಡಿಗೆ ಮಹೇಶನ ಸ್ಟೋರಿ ಇದು. ಅಪ್ಪಟ ಅಂಬಿ ಅಭಿಮಾನಿಯಾಗಿದ್ದ ಮಹೇಶ್, ಮಗನ ಹುಟ್ಟುಹಬ್ಬಕ್ಕೆ ಅಂಬಿ ಪುತ್ರ ಅಭಿಷೇಕ್ ಜೊತೆಗಿರುವ ಫೋಟೊ ಕೇಕ್ ಕತ್ತರಿಸಿ ಬರ್ತ್ ಡೇ ಮಾಡಿದ್ದ. ಹೀಗೆ ಮಂಡ್ಯದ ಗಂಡು ಅಂಬಿ ಅಭಿಮಾನಿಯಾಗಿದ್ದ ಮಹೇಶ್ ನ ಇಡೀ ಕುಟುಂಬ ಸಾವಿನ ಮನೆ ಸೇರಿದೆ. ಅಂಬಿಯಂತೆ ಧೈರ್ಯವಾಗಿರಬೇಕಿದ್ದ ವ್ಯಕ್ತಿ ಅನಾರೋಗ್ಯಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಹೇಶ ರೋಗಕ್ಕೆ ಹೆದರಿ ಸಾವಿನ ದಾರಿ ಹಿಡಿದ್ರೆ, ತನ್ನ ಸಾವಿನ ನಂತರ ಪತ್ನಿ ಮತ್ತು ಪುತ್ರ ಬೇರೆಯವರಿಗೆ ಹೊರೆಯಾಗಬಾರದು ಅಂತ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಒಬ್ಬರ ಹಿಂದೆ ಒಬ್ಬರಂತೆ ಆ್ಯಂಬುಲೆನ್ಸ್ ಒಳಗೆ ಶವವಾಗಿ ಹೋಗ್ತಿರೊ ಇವ್ರೆ ಆ ನತದೃಷ್ಟರು. ಮಹೇಶ್ , ಜ್ಯೋತಿ ಮತ್ತು ಪುತ್ರ ನಂದೀಶ್. ಡೆತ್ ನೋಟ್ ಬರೆದಿರುವ ಮಹೇಶ್ ತನ್ನ ನೋವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ.
ದಯವಿಟ್ಟು ನನ್ನನ್ನು ಕ್ಷಮಿಸಿ. ನನಗೆ ಅನಾರೋಗ್ಯ ಇನ್ನಿಲ್ಲದಂತೆ ಬಾಧಿಸುತ್ತಿದೆ. ಹಾಗಾಗಿ ಸಾಯುವ ನಿರ್ಧಾರ ಮಾಡಿದ್ದೇನೆ. ನಾನು ಸತ್ತ ಮೇಲೆ ನನ್ನ ಪತ್ನಿ ಹಾಗೂ ಮಗ ಬೀದಿಗೆ ಬೀಳಬಹುದು. ಹಾಗೆ ಬಿಡಲು ಮನಸ್ಸು ಒಪ್ಪುತ್ತಿಲ್ಲ. ನನ್ನ ಪತ್ನಿ ಕುಟುಂಬಸ್ಥರೂ ಕೂಡ ಸ್ಥಿತಿವಂತರೇನಲ್ಲ. ನನ್ನ ತಂದೆ- ತಾಯಿಯನ್ನು ಸಹೋದರರು ನೋಡಿಕೊಳ್ಳಿ. ನನ್ನ ಹೆಸರಲ್ಲಿ ಒಂದು ಲಕ್ಷ ಎಫ್ ಡಿ ಇದೆ. ಸಾಕಷ್ಟು ಸಾಲ ನೀಡಿದ್ದೇನೆ. ಅದೆಲ್ಲವನ್ನು ಪಡೆದು ಸಮಾನವಾಗಿ ಹಂಚಿಕೊಳ್ಳಿ ಎಂದು ಬರೆದಿದ್ದಾನೆ.
ಮಹೇಶ್ ಮೆಯೋಹಾಲ್ ನ ಕಂದಾಯ ಇಲಾಖೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡಿಕೊಂಡಿದ್ದ. ತಮ್ಮ ಕುಟುಂಬದ ಅಭಿಮಾನಿಯ ಸಾವಿನ ಸುದ್ದಿ ತಿಳಿದು ಕಿಮ್ಸ್ ಶವಾಗಾರಕ್ಕೆ ಆಗಮಿಸಿದ ಅಭಿಷೇಕ್ ಅಂಬರೀಶ್, ಅಂತಿಮ ದರ್ಶನ ಪಡೆದ್ರು. ಅಲ್ಲದೆ, ಯಾರೂ ಕೂಡ ಇಂತಹ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು. ಪ್ರತಿ ಹುಟ್ಟುಹಬ್ಬಕ್ಕೆ ಅಂಬಿ ನಿವಾಸಕ್ಕೆ ಬಂದು ಅಂಬರೀಶ್ ಫೋಟೊ ಮುಂದೆ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದುದ್ದನ್ನು ನೆನೆದು ಭಾವುಕರಾದ್ರು.
ಏನೇ ಹೇಳಿ... ಅನಾರೋಗ್ಯ ಇದ್ದಿದ್ರೆ ಸರಿಯಾದ ಚಿಕಿತ್ಸೆ ಪಡೆದಿದ್ರೆ ಕಡಿಮೆ ಆಗ್ತಿತ್ತೋ ಏನೋ. ಆದ್ರೆ, ಪತ್ನಿ ಹಾಗೂ ಮಗುವನ್ನೂ ಕೊಂದು ಆತನೂ ಆತ್ಮಹತ್ಯೆ ಮಾಡಿಕೊಂಡಿದ್ದು ನಿಜಕ್ಕೂ ದುರಂತ.
PublicNext
20/08/2022 08:16 am