ನೆಲಮಂಗಲ: ನಿನ್ನೆ ತಡರಾತ್ರಿ ಶ್ರೀ ವರಮಹಾಲಕ್ಷ್ಮೀ ಹಬ್ಬದ ವ್ಯಾಪಾರ ಮುಗಿಸಿ ಹೊರಟ ಅಂಗಡಿ ಮಾಲೀಕರಿಗೆ ಬೆಳಗ್ಗೆದ್ದು ನೋಡಿದ್ರೆ ಬಿಗ್ ಶಾಕ್ ಕಾದಿತ್ತು. ನಗರದ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲೇ ತಡರಾತ್ರಿ ಕಳ್ಳರು ತಮ್ಮ ಕರಾಮತ್ತು ತೋರಿದ್ದಾರೆ. 11 ಅಂಗಡಿಗಳಲ್ಲಿ ಕಳ್ಳತನಕ್ಕೆ ಯತ್ನಿಸಿದ್ದು, 5-6 ಅಂಗಡಿಗಳ ಬೀಗ ಮುರಿದು ಕಳ್ಳತನ ಮಾಡಿದ್ದು, ಕಳ್ಳತನದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಬಿಳಿ ಬಣ್ಣದ ಡಿಯೋ ಬೈಕ್ ನಲ್ಲಿ ಬಂದ ಇಬ್ಬರು ಖದೀಮರು ಅಂಗಡಿಗಳ ಬೀಗ ಮುರಿದು ಕಳ್ಳತನ, ಪರಿಶೀಲನೆ ನಡೆಸ್ತಿರೋ ಪೊಲೀಸ್ರು, ಶ್ವಾನದಳದಿಂದ ಆರೋಪಿಗಳ ತಲಾಷ್... ಈ ದೃಶ್ಯಗಳು ಕಂಡು ಬಂದದ್ದು, ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ನಗರದ ಪೊಲೀಸ್ ಠಾಣೆ ಕೂಗಳತೆ ದೂರದಲ್ಲೇ ಕಳ್ಳರು ತಮ್ಮ ಕೈಚಳಕ ತೋರಿದ್ದು ಒಟ್ಟು 11 ಅಂಗಡಿಗಳಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆ. 5-6 ಅಂಗಡಿಗಳಲ್ಲಿ ಕಳ್ಳತನ ಮಾಡಿದ್ದಾರೆ. ಆದ್ರೆ 6 ಅಂಗಡಿಗಳಲ್ಲಿ ಕಳ್ಳತನ ಯತ್ನ ವಿಫಲವಾಗಿದೆ. ಕಳ್ಳತನದ ಚಿತ್ರಣ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನೆಲಮಂಗಲ ನಗರದ ಸೊಂಡೆಕೊಪ್ಪ ರಸ್ತೆ, ಪೇಟೆ ಬೀದಿ, ಸುಭಾಷ್ ನಗರದಲ್ಲಿನ ಶಿವಾನಂದ ಪ್ರಾವಿಷನ್ ಸ್ಟೋರ್‌ನಲ್ಲಿ 20 ಸಾವಿರ ನಗದು, ಮಾದೇಶ್ ಎಂಬವರ ಪ್ರಾವಿಷನ್ ಸ್ಟೋರ್‌ನಲ್ಲಿ 20 ಸಾವಿರ ನಗದು ಹಾಗೂ 80 ಸಾವಿರ ಮೌಲ್ಯದ ಸಾಮಗ್ರಿ, ಸಾಯಿ ಟ್ರೇಡರ್ಸ್‌ನಲ್ಲಿ 60 ಸಾವಿರ ನಗದು, ಮಹದೇಶ್ವರ ಸ್ಟೋರ್‌ನಲ್ಲಿ 50 ಸಾವಿರ ನಗದು ಸೇರಿದಂತೆ ಮೊಬೈಲ್ ಅಂಗಡಿಯಲ್ಲಿ 3 ಸಾವಿರ ನಗದು ಕದ್ದು ಆರೋಪಿಗಳು ಪರಾರಿಯಾಗಿದ್ದಾರೆ.
ಘಟನಾ ಸ್ಥಳದಲ್ಲಿ ಬೆರಳಚ್ಚು ತಜ್ಞರು, ಶ್ವಾನದಳ ಪರಿಶೀಲನೆ ನಡೆಸಿದೆ. ಆದರೆ, ತಡರಾತ್ರಿ ನಡೆದ ಕಳ್ಳತನ ಕೃತ್ಯದ ಕುರಿತು ಅಂಗಡಿ ಮಾಲೀಕರು ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖುದ್ದು ಅಡಿಷನಲ್ ಎಸ್ಪಿ ಪುರುಷೋತ್ತಮ್ ಸ್ಥಳ ಪರಿಶೀಲನೆ ನಡೆಸಿದರು.
PublicNext
05/08/2022 10:46 pm