ಬೆಂಗಳೂರು: ಕರ್ನಾಟಕ ಪ್ರಾದೇಶಿಕ ಸಾರಿಗೆ ಕಚೇರಿಗೆ ಪಂಗನಾಮ ಹಾಕಿ ಕೋಟಿ ಕೋಟಿ ರೂಪಾಯಿ ವಂಚಿಸಿರುವ ಪ್ರಕರಣ ಸಂಬಂಧ ಬಗೆದಷ್ಟು ಹೊಸ ಹೊಸ ವಿಚಾರಗಳು ಬಹಿರಂಗವಾಗುತ್ತಿದೆ. ಆರ್ ಟಿಓ ಕೋಟಿ ಕೋಟಿ ವಂಚನೆಯ ಜಾಲದಿಂದ ಹಲವಾರು ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. ನಕಲಿ ಚಲನ್ ಗಳನ್ನು ಅಪ್ಲೋಡ್ ಮಾಡಿ ವಂಚಿಸಿರುವುದು ತಿಳಿದುಬಂದಿದೆ.
ರಸ್ತೆ ತೆರಿಗೆ ಕಟ್ಟದೇ ಸುಮಾರು 50 ಕೋಟಿ ರೂ.ಗೂ ಅಧಿಕ ಹಣವನ್ನು ಅಧಿಕಾರಿಗಳು ನುಂಗಿ ನೀರು ಕುಡಿದಿದ್ದಾರೆ. ಇದೇ ಪ್ರಕರಣ ಸಂಬಂಧ ಮಲ್ಲೇಶ್ವರಂ ಪೊಲೀಸರು ಈ ಹಿಂದೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಚಿತ್ರನಟಿ ರಾಗಿಣಿಯ ಸ್ನೇಹಿತ ರವಿಶಂಕರ್ ಹಾಗೂ ಅಜಯ್ ಗೆ ಖಾಕಿ ಕೋಳ ತೋಡಿಸಿತ್ತು.
ವಿಚಾರಣೆ ವೇಳೆ ರಾಗಿಣಿಯ ಸ್ನೇಹಿತ ನಿಜ ಬಾಯ್ಬಿಟ್ಟಿದ್ದಾನೆ. ಹಲವು ಆರ್ ಟಿಓ ಅಧಿಕಾರಿಗಳು ಶಾಮೀಲಾಗಿ ಸರ್ಕಾರದ ಕೋಟ್ಯಾಂತರ ರೂ. ಹಣವನ್ನು ಗುಳುಂ ಮಾಡಿದ್ದಾರಂತೆ. ಇದೀಗ ಮಲ್ಲೇಶ್ವರಂ ಪೊಲೀಸರು ವಂಚನೆ ಎಸಗಿರುವ ಅಧಿಕಾರಿಗಳ ವಿಚಾರಣೆಗೆ ಮುಂದಾಗಿದ್ದಾರೆ.
ಈ ಸಂಬಂಧ ಕೋರಮಂಗಲ ಠಾಣೆಯಲ್ಲೂ ಹೊಸದೊಂದು ಎಫ್ ಐಆರ್ ದಾಖಲಿಸಲಾಗಿದೆ. ಡಾಟಾ ಎಂಟ್ರಿ ಆಪರೇಟರ್ ಸಂತೋಷ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕೋರಮಂಗಲದ ಆರ್ಟಿಓದಲ್ಲಿ ಸಂತೋಷ್ ಡಾಟಾ ಎಂಟ್ರಿ ಆಪರೇಟರ್ ಆಗಿದ್ದ. 2015 ರಿಂದ 2019 ರವರೆಗೂ ನಡೆದ ಬ್ರಹ್ಮಾಂಡ ಭ್ರಷ್ಟಾಚಾರ ಸದ್ಯದಲ್ಲೇ ಬಯಲಿಗೆ ಬರಲಿದೆ. ಇದೀಗ ನೂರಾರು ಕೋಟಿ ರೂ. ವಂಚನೆಯ ಜಾಡು ಹಿಡಿದು ಖಾಕಿ ಟೀಂ ತನಿಖೆ ನಡೆಸುತ್ತಿದೆ.
Kshetra Samachara
03/08/2022 03:17 pm