ಆನೇಕಲ್: ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಕೈಗಾರಿಕಾ ಪ್ರದೇಶಗಳಲ್ಲಿ ಇತ್ತೀಚೆಗೆ ಅಪರಾಧ ಕೃತ್ಯಗಳು ಹೆಚ್ಚಾದ ಹಿನ್ನೆಲೆಯಲ್ಲಿ ಇಂದು ಹೆಬ್ಬಗೋಡಿ ಖಾಸಗಿ ಹೋಟೆಲ್ ನಲ್ಲಿ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ನೇತೃತ್ವದಲ್ಲಿ ಕೈಗಾರಿಕೋದ್ಯಮಿಗಳ ಜೊತೆ ಸಂವಾದ ನಡೆಸಿದ್ದು, ಕಾರ್ಮಿಕರ ರಕ್ಷಣೆ ಬಗ್ಗೆ ಸಾಕಷ್ಟು ದೂರುಗಳು ಪ್ರತಿಧ್ವನಿಸಿದವು.
ಹೌದು... ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕು ಬೊಮ್ಮಸಂದ್ರ, ಜಿಗಣಿ, ಅತ್ತಿಬೆಲೆ ಕೈಗಾರಿಕೆ ಸೇರಿದಂತೆ ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿ ಸಹ ಹೊಂದಿಕೊಂಡಂತೆ ಇದೆ. ಸಾವಿರಾರು ಮಂದಿ ಕಾರ್ಮಿಕರು ಇಲ್ಲಿನ ಕೈಗಾರಿಕೆಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಆದ್ರೆ, ಇತ್ತೀಚಿನ ಕೆಲ ಬೆಳವಣಿಗೆಗಳು ಕಾರ್ಮಿಕರ ದುಗುಡ ಹೆಚ್ಚಿಸಿದೆ.
ಹಣ, ಮೊಬೈಲ್, ಚಿನ್ನದ ಸರ ದೋಚಲು ಕಾರ್ಮಿಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗುತ್ತಿದೆ. ಜೊತೆಗೆ ಕಾರ್ಮಿಕರನ್ನು ಕೇವಲ ಹಣ, ಮೊಬೈಲ್ ಆಸೆಗೆ ಕೊಲ್ಲಲಾಗುತ್ತಿದೆ. ಅದ್ರಲ್ಲೂ ರಾತ್ರಿ ವೇಳೆ ಕಾರ್ಮಿಕರು ಓಡಾಡಲು ಬೀದಿದೀಪ ಕೂಡ ಇಲ್ಲದೆ ಭಯದಲ್ಲಿ ದುಡಿಯುವಂತಾಗಿದೆ ಎಂದು ಕೈಗಾರಿಕೋದ್ಯಮಿಗಳು ದೂರುಗಳ ಸುರಿಮಳೆಗೈದಿದ್ದಾರೆ.
ಇನ್ನು, ಕೈಗಾರಿಕೋದ್ಯಮಿಗಳು ತಮ್ಮ ತಮ್ಮ ಸಮಸ್ಯೆಗಳನ್ನು ಸಭೆಯಲ್ಲಿ ತಿಳಿಸಿದ್ದಾರೆ. ಮೊಬೈಲ್, ಹಣಕ್ಕಾಗಿ ಕಾರ್ಮಿಕರ ಮೇಲೆ ಹಲ್ಲೆ, ಸುಲಿಗೆಯಂತಹ ಪ್ರಕರಣಗಳು, ಟ್ರಾಫಿಕ್ ಕಿರಿಕಿರಿ, ರಸ್ತೆ ಹಮ್ಸ್ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ತಿಳಿಸಿದ್ದಾರೆ.
ಒಟ್ಟಿನಲ್ಲಿ ಕೈಗಾರಿಕಾ ಪ್ರದೇಶಗಳಲ್ಲಿ ಹೆಚ್ಚಾಗುತ್ತಿರುವ ಅಪರಾಧ ಕೃತ್ಯ ನಿಯಂತ್ರಿಸಲು ಪೊಲೀಸ್ ಇಲಾಖೆ, ಕೈಗಾರಿಕೋದ್ಯಮಿಗಳ ಅಭಿಪ್ರಾಯ- ಸಹಕಾರ ಪಡೆಯುವ ಸಲುವಾಗಿ ಮೊದಲ ಹೆಜ್ಜೆ ಇಟ್ಟಿದ್ದು, ಮುಂದಿನ ದಿನಗಳಲ್ಲಿ ಅಪರಾಧ ಕೃತ್ಯಗಳಿಗೆ ಕಡಿವಾಣ ಬೀಳಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.
- ಹರೀಶ್ ಗೌತಮನಂದ, ಪಬ್ಲಿಕ್ ನೆಕ್ಸ್ಟ್ ಆನೇಕಲ್
PublicNext
02/08/2022 10:08 pm