ಬೆಂಗಳೂರು: ಕಳ್ಳಕಾಕರಿಗೆ ಪೊಲೀಸರ ಭಯ ಸ್ವಲ್ಪವೂ ಇಲ್ಲ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಹೌದು ನಗರ ಪೊಲೀಸ್ ಆಯುಕ್ತರ ಕಚೇರಿ ಬಳಿಯೇ ಕಳ್ಳರು ಕೈಚಳಕ ತೋರಿರುವ ಘಟನೆ ಬೆಳಕಿಗೆ ಬಂದಿದೆ.
ಮನೆಯ ಇಎಂಐ ಕಟ್ಟಲು ತಂದಿದ್ದ 4.5 ಲಕ್ಷ ರೂಪಾಯಿ ಹಣವನ್ನ ನಗರ ಪೊಲೀಸ್ ಆಯುಕ್ತರ ಕಚೇರಿಯ ಬಳಿಯೇ ಕಾರಿನ ಗ್ಲಾಸ್ ಒಡೆದು ಖದೀಮರು ದೋಚಿದ್ದಾರೆ. ಕಳೆದ ಮೂರು ದಿನದ ಹಿಂದೆ ಲಕ್ಷ್ಮೀಶ್ ಎಂಬುವವರು ಮಹದೇವಪುರದ ಕೆನರಾ ಬ್ಯಾಂಕ್ ಗೆ ಹಣ ಕಟ್ಟಲು ಹೋಗಿದ್ದರು.
ಆದರೆ ಕೌಂಟರ್ ಬಳಿ ಹಣ ಪಾವತಿಸುವಾಗ ಪ್ಯಾನ್ ಕಾರ್ಡ್ ಮರೆತು ಬಂದಿರುವುದು ಗೊತ್ತಾಗಿದೆ. ಹೀಗಾಗಿ ಹಣ ತರಲು ಮನೆಗೆ ತೆರಳಬೇಕಾಯ್ತು. ಮಾರ್ಗ ಮಧ್ಯೆ ಪರಿಚಯಸ್ಥರನ್ನ ಭೇಟಿಯಾಗಲು ಪೊಲೀಸ್ ಆಯುಕ್ತರ ಕಚೇರಿಗೆ ಬಂದಿದ್ದಾರೆ. ಈ ವೇಳೆ ಕಾರಿನ ಡ್ಯಾಶ್ ಬೋರ್ಡ್ ನಲ್ಲಿ ಹಣ ಇಟ್ಟಿದ್ರು. ಲಕ್ಷ್ಮೀಶ್ ಅವರನ್ನು ಮಹದೇವಪುರದಿಂದ ಓಜಿ ಕುಪ್ಪಂ ಗ್ಯಾಂಗ್ ನ ನಾಲ್ವರು ಖದೀಮರು ಕಮೀಷನರ್ ಕಚೇರಿ ಬಳಿಯವರೆಗೂ ಹಿಂಬಾಲಿಸಿಕೊಂಡು ಬಂದಿದ್ದಾರೆ.
ಲಕ್ಷ್ಮೀಶ್ ಕಾರಿನಲ್ಲಿ ಹಣ ಇಟ್ಟಿರುವುದನ್ನು ಪಕ್ಕ ಮಾಡಿಕೊಂಡಿದ್ದಾರೆ. ಕಾರಿನ ಗಾಜು ಒಡೆದು ಹಣ ದೋಚಿ ಪರಾರಿಯಾಗಿದ್ದಾರೆ. ಇನ್ನೂ ಘಟನೆ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಪೊಲೀಸ್ ಆಯುಕ್ತರ ಕಚೇರಿ ಬಳಿಯೇ ಕಳ್ಳರು ಯಾರ ಭಯವಿಲ್ಲದೇ ಹಣ ದೋಚಿರುವುದು ಚರ್ಚೆಗೆ ಗ್ರಾಸವಾಗಿದೆ. ಕಳ್ಳತನವಾಗಿ ಮೂರು ದಿನವಾದ್ರೂ ಸಹ ಖದೀಮರನ್ನು ಪೊಲೀಸರು ಬಂಧಿಸಿಲ್ಲ. ಸದ್ಯ ಕಾರ್ಯಪ್ರವೃತ್ತರಾಗಿರುವ ಪೊಲೀಸರು ಓಜಿ ಕುಪ್ಪಂ ಗ್ಯಾಂಗನ್ನು ಬಂಧಿಸಲು ಬಲೆ ಬೀಸಿದ್ದಾರೆ.
PublicNext
23/07/2022 01:22 pm