ಬೆಂಗಳೂರು: ಬೆಂಗಳೂರು ದಕ್ಷಿಣ ವಲಯದ 2 ಪೊಲೀಸ್ ಠಾಣೆಯಲ್ಲಿ ನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದವರನ್ನು ಬಂಧಿಸಿ ಒಟ್ಟು 76 ಬೈಕ್ ಗಳನ್ನು ಮಾಲೀಕರಿಗೆ ಹಿಂತಿರುಗಿಸಿದ್ದಾರೆ.
ಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 26 ಬೈಕ್ ಗಳನ್ನು ಕಳ್ಳರಿಂದ ವಶಪಡಿಸಿಕೊಂಡಿದ್ದಾರೆ. ಇನ್ನೊಂದು ಕಡೆ ಮೈಕೋ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 50 ಬೈಕ್ ಗಳ ಕಳ್ಳತನ ಮಾಡಿದ್ದ ಯುವಕನನ್ನು ಬಂಧಿಸಲಾಗಿದೆ. ಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ ಬೈಕ್ ಗಳನ್ನು ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಆರೋಪಿಗಳು ಮಾರಿರೋದು ತಿಳಿದುಬಂದಿದೆ.
ಇನ್ನೊಂದು ಕಡೆ ಮೈಕೋ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಬೈಕ್ ಗಳನ್ನು ಆರೋಪಿ ವೀಲಿಂಗ್ ಗಾಗಿ ಬಳಸುತ್ತಿದ್ದು, ನಂತರ ಬೈಕ್ ಮಾರುತ್ತಿದ್ದ. ಈ ಆರೋಪಿ 2019 ರಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಓಡಾಡುತ್ತಿದ್ದ. ಆದರೆ ಮೈಕೋ ಲೇಔಟ್ ಪೊಲೀಸ್ ಠಾಣೆ ಸಿಬ್ಬಂದಿ ಆರೋಪಿಯನ್ನು ಹಿಡಿಯುವ ಕಾರ್ಯ ನಿಲ್ಲಿಸಲೇ ಇಲ್ಲ. ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಹಿಡಿದು ವಿಚಾರಣೆ ನಡೆಸಿದಾಗ ಈತ ಬರೋಬ್ಬರಿ 50 ಬೈಕ್ಗಳನ್ನು ಕದ್ದಿರುವುದು ಬೆಳಕಿಗೆ ಬಂತು. ಈತ ವೀಲಿಂಗ್ ಮಾಡುವ ವಿಡಿಯೋಗಳನ್ನು ಸಾಮಾಜಿಕ ತಾಣಗಳಲ್ಲಿ ಹರಿ ಬಿಡುತ್ತಿದ್ದ.
ಅಂತೂ ಕಂಡಕಂಡವರ ಬೈಕ್ ಕದ್ದು ಬೇಕಾಬಿಟ್ಟಿ ವೀಲಿಂಗ್ ಮಾಡಿ ಮೋಜು-ಮಸ್ತಿ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಮತ್ತೆ ಬೈಕ್ ಸಿಕ್ಕ ಮಾಲೀಕರ ಮುಖದಲ್ಲಿ ನಗುವಿಗೆ ಪೊಲೀಸರು ಸಾಕ್ಷಿಯಾಗಿದ್ದಾರೆ.
-ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
22/07/2022 08:20 pm