ದೊಡ್ಡಬಳ್ಳಾಪುರ: ಸಾಲ ಕೊಟ್ಟವರ ಕಿರುಕುಳಕ್ಕೆ ಬೇಸತ್ತ ದಂಪತಿ ರೈಲಿಗೆ ತಲೆ ಕೊಟ್ಟಿದ್ದಾರೆ! ಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಹೆಂಡತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ದೊಡ್ಡಬಳ್ಳಾಪುರ ನಗರದ ಮುತ್ತೂರು ಬಳಿಯ ರೈಲ್ವೆ ಹಳಿ ಬಳಿ ಘಟನೆ ನಡೆದಿದ್ದು, ಇಂದು ಮಧ್ಯಾಹ್ನ 1:30 ಸಮಯ ಹಳಿ ಬಳಿ ಬಂದಿದ್ದ ದಂಪತಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಸಂದರ್ಭ ಮೌಲಾಖಾನ್(40 ವರ್ಷ) ಸ್ಥಳದಲ್ಲೇ ಮೃತಪಟ್ಟರು. ಪತ್ನಿ ಸಮೀನಾ ಗಂಭೀರ ಗಾಯಗೊಂಡಿದ್ದು, ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೌಲಾಖಾನ್ ನಗರದ ಇಸ್ಲಾಂಪುರ ನಿವಾಸಿಯಾಗಿದ್ದು, 17 ವರ್ಷಗಳಿಂದ ನೇಕಾರಿಕೆ ಮಾಡುತ್ತಿದ್ದರು. ಹಣಕಾಸಿನ ಸಮಸ್ಯೆಯಿಂದಾಗಿ ಮೈಕ್ರೋ ಫೈನಾನ್ಸ್ ಕಂಪನಿಗಳಾದ ಬಂಧನ, SKS, ಬಜಾಜ್ ಫೈನಾನ್ಸ್ ನಲ್ಲಿ 1.50 ಲಕ್ಷ ರೂ. ಸಾಲ ಮಾಡಿದ್ದರು. ಸಾಲ ಮರು ಪಾವತಿಸುವಂತೆ ಕಂಪನಿ ಪ್ರತಿನಿಧಿಗಳು ದಿನವೂ ಕಿರುಕುಳ ನೀಡುತ್ತಿದ್ದರು.
ಇತ್ತೀಚೆಗೆ ನೇಕಾರಿಕೆ ಕೆಲಸದಿಂದ ಅಷ್ಟೇನೂ ಆದಾಯ ಇರಲಿಲ್ಲ. ಇಂದು ಬೆಳಗ್ಗೆ ಮನೆ ಮುಂದೆ ಬಂದಿದ್ದ ಫೈನಾನ್ಸ್ ಪ್ರತಿನಿಧಿಗಳು ಸಾಲ ಮರುಪಾವತಿಸುವಂತೆ ಗಲಾಟೆನೇ ಮಾಡಿದ್ರು. ಇದರಿಂದ ಬೇಸತ್ತ ದಂಪತಿ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ರು. ಸಮೀನಾ ತಾಯಿ ಮನೆಯಾದ ಮುತ್ತೂರು ಸಮೀಪದ ಹಳಿಯಲ್ಲಿ ರೈಲಿಗೆ ತಲೆ ಕೊಟ್ಟಿದ್ದಾರೆ. ಈ ವೇಳೆ ಮೌಲಾಖಾನ್ ರೈಲಿನ ಪ್ರಹಾರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಸಮೀನಾ ಬಚಾವ್ ಆಗಿದ್ದಾರೆ.
PublicNext
07/07/2022 08:45 pm