ಬೆಂಗಳೂರು: ಊಟಕ್ಕೆ ಬಂದ ಗ್ರಾಹಕರ ಮೇಲೆ ಸಪ್ಲೈಯರ್ಸ್, ಮ್ಯಾನೇಜರ್ ಹಲ್ಲೆಗೈದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಮಹಾಲಕ್ಷ್ಮಿ ಲೇಔಟ್ ಠಾಣಾ ವ್ಯಾಪ್ತಿಯ ಎಂಪೈರ್ ಹೊಟೇಲ್ ಗೆ ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ಅಭಿಷೇಕ್, ಅನೀಶ್, ಜಾನ್ಸನ್ ಎಂಬುವವರು ಊಟಕ್ಕೆ ಬಂದಿದ್ದರು.
ಈ ವೇಳೆ ಚಿಕನ್ ಆರ್ಡರ್ ಮಾಡಿದ್ರು. ಆದರೆ, ಹೊಟೇಲ್ ನವರು ಚಿಕನ್ ಕೊಟ್ಟಾಗ ಪೀಸ್ ಕಮ್ಮಿ ಇದ್ವಂತೆ. ಹೀಗಾಗಿ ಜಾನ್ಸನ್ ಎಂಬಾತ "ಚಿಕನ್ ಪೀಸ್ ಕಡಿಮೆ ಕೊಟ್ಟು, ಬಿಲ್ ಜಾಸ್ತಿ ಕೊಟ್ಟಿದ್ದೀರಾ. ಇದು ಸರಿಯಲ್ಲ" ಎಂದಿದ್ದಾನೆ. ಹೀಗಾಗಿ ಎಂಪೈರ್ ಹೋಟೆಲ್ ಸಿಬ್ಬಂದಿ ಹಾಗೂ ಊಟಕ್ಕೆ ಬಂದ ಮೂವರ ನಡುವೆ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದು ಸಿಬ್ಬಂದಿ
ಸ್ಟೀಲ್ ಜಗ್, ರಾಡ್ ಗಳಿಂದ ಗ್ರಾಹಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಘಟನೆಯಲ್ಲಿ ಅಭಿಷೇಕ್ ಎಂಬಾತನ ತಲೆಗೆ ಗಂಭೀರ ಗಾಯವಾಗಿದ್ದು, ಹಲ್ಲೆಗೊಳಗಾದವರು ಪೊಲೀಸ್ ಠಾಣೆಗೆ ದೂರು ದಾಖಲಿಸಲು ಮುಂದಾಗಿದ್ದಾರೆ. ಈ ಬಗ್ಗೆ ಹೋಟೆಲ್ ಮ್ಯಾನೇಜರ್ ಬಳಿ ಕೇಳಿದ್ರೆ "ಸಣ್ಣಪುಟ್ಟ ಘಟನೆಯಾಗುತ್ತೆ. ಈ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇವೆ. ನಾವು ಸಮಸ್ಯೆಯನ್ನು ರಾಜಿ ಸಂಧಾನ ಮೂಲಕ ಬಗೆಹರಿಸಿಕೊಳ್ಳುತ್ತೇವೆ" ಎಂದಿದ್ದಾರೆ.
ಒಟ್ಟಿನಲ್ಲಿ ಮಾತಿನಲ್ಲೇ ಬಗೆಹರಿಸಿಕೊಳ್ಳಬೇಕಿದ್ದ ಚಿಕನ್ ಪೀಸ್ ಮ್ಯಾಟ್ರು ಪೊಲೀಸ್ ಠಾಣೆವರೆಗೂ ಬಂದು ನಿಂತಿದೆ ನೋಡಿ!
PublicNext
26/06/2022 04:33 pm