ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಾಡಹಾಗಲೇ ಲಾಂಗ್- ಮಚ್ಚುಗಳನ್ನು ಪುಂಡರು ಜಳಪಿಸಿದ್ದಾರೆ. ರೌಡಿಶೀಟರ್ ಮೇಲೆ ಹಲ್ಲೆ ನಡೆಸಲು ನಡುರಸ್ತೆಯಲ್ಲೆ ಲಾಂಗ್ ಬೀಸಿರೋ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಕೊತ್ತನೂರು ಠಾಣೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಕೊತ್ತನೂರು ಠಾಣೆ ರೌಡಿಶೀಟರ್ ಜಲಕ್ ಹಲ್ಲೆಗೊಳಗಾಗಿದ್ದು, ಈತ ನೀಡಿದ ದೂರಿನಂತೆ ಕುಮಾರ್ ಹಾಗೂ ಮೋಹನ್ ಎಂಬವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಲಕ್ ರೌಡಿಶೀಟರ್ ಆಗಿದ್ದು, ಗೋಬಿ ಮಂಚೂರಿ ಅಂಗಡಿ ನಡೆಸುತ್ತಿದ್ದ. ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಜಲಕ್ ಈ ಹಿಂದೆ ಕುಮಾರ್ ಮೇಲೆ ಹಲ್ಲೆ ನಡೆಸಿದ್ದ.
ಇದೇ ಕಾರಣಕ್ಕಾಗಿ ಕುಮಾರ್ ತನ್ನ ಸಹಚರ ಮೋಹನ್ ಜೊತೆ ಸೇರಿ ಜಲಕ್ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದ. ಇದರಂತೆ ಜಲಕ್ ನ ಚಲನವಲನ ಬಗ್ಗೆ ನಿಗಾ ಇಟ್ಟಿದ್ದ ಆರೋಪಿಗಳು, ಜೂ. 11ರಂದು ಹೆಗಡೆನಗರ ಬಳಿ ಬೈಕ್ ನಲ್ಲಿ ಒಬ್ಬಂಟಿಯಾಗಿ ಜಲಕ್ ಬರುತ್ತಿರುವ ಬಗ್ಗೆ ತಿಳಿದು, ಮಾರಕಾಸ್ತ್ರ ಸಮೇತ ಹೊಂಚು ಹಾಕಿ ಕುಳಿತಿದ್ದಾರೆ. ಹತ್ತಿರಕ್ಕೆ ಬರುತ್ತಿದ್ದಂತೆ ಸಿನಿಮೀಯ ಶೈಲಿಯಲ್ಲಿ ಅಟ್ಯಾಕ್ ಮಾಡಿದ್ದಾರೆ.
ಘಟನೆಯಲ್ಲಿ ರೌಡಿಶೀಟರ್ ಜಲಕ್ ಕೈಗೆ ತೀವ್ರ ಗಾಯವಾಗಿದೆ. ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಂಡಿದ್ದಾನೆ. ಹಲ್ಲೆಯ ಚಿತ್ರಣ ಸಿಸಿ ಟಿವಿಯಲ್ಲಿ ದಾಖಲಾದ ಹಿನ್ನೆಲೆಯಲ್ಲಿ ಕೇಸು ದಾಖಲಿಸಿದ ಕೊತ್ತನೂರು ಪೊಲೀಸರು ಕೂಡಲೇ ಈ ಇಬ್ಬರನ್ನು ಬಂಧಿಸಿ ಸೆರೆಮನೆಗೆ ಅಟ್ಟಿದ್ದಾರೆ. ಹಲ್ಲೆಕೋರರ ವಿರುದ್ಧ ರೌಡಿಶೀಟ್ ತೆರೆಯಲು ಪೊಲೀಸರು ಮುಂದಾಗಿದ್ದಾರೆ.
PublicNext
20/06/2022 08:48 pm