ನೆಲಮಂಗಲ: ಜಮೀನೊಂದರ ವಿಚಾರವಾಗಿ ಊರಿನ ಪ್ರಮುಖರ ಸಮ್ಮುಖದಲ್ಲಿ ದಾಯಾದಿಗಳೊಂದಿಗೆ ಸಣ್ಣ ಸಂಧಾನ ನಡೆಯುತ್ತಿತ್ತು. ಸಂಧಾನದಲ್ಲಿ ಮಾತಿಗೆ ಮಾತು ಬೆಳೆದು ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿ ಕುಸ್ತಿಗೆ ಬಿದ್ರು. ಆ ಕುಸ್ತಿಯಲ್ಲಿ ಒಂದು ಪ್ರಾಣ ಪಕ್ಷಿ ಹಾರಿ ಹೋಗಿದ್ರೆ, ಅವರನ್ನ ಕೊಂದ ಆರೋಪಿಗಳೀಗ ಜೈಲುಪಾಲಾಗಿದ್ದಾರೆ..
ಒಂದೆಡೆ ಕುಟುಂಬದ ಹಿರಿಯ ಜೀವವನ್ನ ಕಳೆದ್ಕೊಂಡ ಒಂದು ಇಡೀ ಕುಟುಂಬ ನೋವಿನಲ್ಲಿದ್ರೆ, ಮತ್ತೊಂದೆಡೆ ತಮ್ಮನ್ನು ಪೋಷಿಸುತ್ತಿದ್ದ ಒಡೆಯನಿಲ್ಲದೆ ರಾಸುಗಳು ಮೂಕರೋದನೆ ಅನುಭವಿಸುತ್ತಿವೆ. ನಾಲ್ಕು ದಿನಗಳಿಂದ ಕಟ್ಟಿದ ಜಾಗದಲ್ಲಿಯೇ ಸಂಕಟ ಅನುಭವಿಸುತ್ತಿದೆ. ಹೌದು ಕಳೆದ 16ನೇ ತಾರೀಖಿನಂದು ಬೆಂ.ಗ್ರಾ. ಜಿಲ್ಲೆ ನೆಲಮಂಗಲ ತಾಲ್ಲೂಕಿನ ಬೈರಸಂದ್ರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರೈತ ಪುಟ್ಟರಾಜು ಕೊಲೆಯಾದ ವ್ಯಕ್ತಿ. ಕೊಲೆ ಆರೋಪಿಗಳಾದ ಮಂಜುನಾಥ್, ಬೈರಪ್ಪ ಹಾಗೂ ಶೇಖರಪ್ಪ ಬಂಧಿತರು.
ಬೈರಸಂದ್ರ ಗ್ರಾಮದ ಸರ್ವೆ ನಂ.7ರ ಜಮೀನಿನಲ್ಲಿ ಆರೋಪಿ ಮಂಜುನಾಥ್ ಹಾಗೂ ಮೃತ ಪುಟ್ಟರಾಜುಗೆ ಸೇರಿದಂತೆ 4 ಜನ್ರ ಹೆಸರಲ್ಲಿ ಜಂಟಿ ಖಾತೆ ಆಗಿತ್ತು. ಆದ್ರೆ ಜಮೀನು ಜಂಟಿ ಖಾತೆಯಲ್ಲಿದ್ದರಿಂದ 4 ಜನ್ರ ಜಮೀನಿಗೆ ರಸ್ತೆ ಒದಗಿಸುವ ಸಲುವಾಗಿ ಗ್ರಾಮದ ಸಿದ್ಧರಾಜು ಎಂಬುವರ ಮನೆ ಬಳಿ ನ್ಯಾಯ ಪಂಚಾಯ್ತಿ ನಡೆಸುತ್ತಿದ್ದಾಗ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಪುಟ್ಟರಾಜು ಸಾವನ್ನಪ್ಪಿದ್ದು, ಆರೋಪಿಗಳು ಟಿ.ಬೇಗೂರಿನ ಮನೆಯೊಂದರಲ್ಲಿ ತಲೆ ಮರೆಸಿಕೊಂಡಿದ್ರು. ಸದ್ಯ ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನ ಅರೆಸ್ಟ್ ಮಾಡಲಾಗಿದೆ.
PublicNext
20/06/2022 05:35 pm