ಆನೇಕಲ್: ಜೈಲಿನಿಂದ ಬೇಲ್ ಮೇಲೆ ಬಿಡುಗಡೆಯಾಗಿದ್ದ ವ್ಯಕ್ತಿ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಲ್ಲದೆ, ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ ಘಟನೆ ಸಮಂದೂರು ಗ್ರಾಪಂನ ಕುವೆಂಪುನಗರದಲ್ಲಿ ನಡೆದಿದೆ. ಸ್ಥಳೀಯ ನಾಗೇಶ ಎಂಬಾತನೇ ಆರೋಪಿ.
ಕಳೆದ ವರ್ಷ ಸಮಂದೂರು ಗ್ರಾಪಂ ವ್ಯಾಪ್ತಿಯ ಕುವೆಂಪುನಗರ ನಿವಾಸಿ ಕುಮಾರ್ ಎಂಬವರ ಮನೆಯಲ್ಲಿ ಮದ್ಯದ ಪಾರ್ಟಿ ನಡೆದಿತ್ತು. ಪಾರ್ಟಿಯಲ್ಲಿ ಆರೋಪಿ ನಾಗೇಶನು ರವಿ, ರಾಜೇಶ್ ಕುಮಾರ್ ಸೇರಿದಂತೆ ಆರು ಮಂದಿ ಸಂಗಡಿಗರ ಜೊತೆ ಕುಡಿದು ಸಖತ್ ಡ್ಯಾನ್ಸ್ ಮಾಡಿದ್ದ. ಕುಡಿದ ಮತ್ತಿನಲ್ಲಿ ನಾಗೇಶ್, ಪಕ್ಕದ ಮನೆಯ ಸುರೇಶ್ ಎಂಬವರ ಅಡುಗೆ ಮನೆಗೆ 2ನೇ ಮಹಡಿಯಿಂದ ಮೂತ್ರ ವಿಸರ್ಜನೆ ಮಾಡಿ ಅಸಭ್ಯವಾಗಿ ವರ್ತಿಸಿದ್ದ!
ಈ ಬಗ್ಗೆ ಸುರೇಶ್ ಹಾಗೂ ಕುಟುಂಬಸ್ಥರು ಪ್ರಶ್ನಿಸಿದ್ದಕ್ಕೆ ಅವರ ಮೇಲೆ ಏರಿ ಹೋಗಿ ಹಲ್ಲೆ ಮಾಡಲಾಗಿತ್ತು. ಈ ಬಗ್ಗೆ ಆನೇಕಲ್ ಠಾಣೆಯಲ್ಲಿ ಕೇಸು ದಾಖಲಾಗಿ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು. ಆದರೆ, 2 ದಿನಗಳ ಹಿಂದೆ ಬೇಲ್ ಮೇಲೆ ಹೊರಗಡೆ ಬಂದು ಸುರೇಶ್ ಹಾಗೂ ಕುಟುಂಬಸ್ಥರಿಗೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ. ಆತ ಮನೆ ಮುಂದೆ ಗಲಾಟೆ ಮಾಡುತ್ತಿರುವ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಈ ಬಗ್ಗೆ ಆನೇಕಲ್ ಠಾಣೆಯಲ್ಲಿ ಆರೋಪಿ ನಾಗೇಶ್ ವಿರುದ್ಧ ದೂರು ನೀಡಲು ಹೋದಾಗ ಕಂಪ್ಲೇಂಟ್ ತೆಗೆದುಕೊಳ್ಳದೆ, ʼರಾಜಿ ಸಂಧಾನ ನಡೆಸಿʼ ಎಂದು ಪೊಲೀಸರು ಹೇಳುತ್ತಾರೆ ಎಂದು ದೂರುದಾರ ಸುರೇಶ್ ಅರೋಪಿಸಿದ್ದಾರೆ.
PublicNext
10/05/2022 09:43 am