ಬೆಂಗಳೂರು:ಜೆಪಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಪ್ರಿಯದರ್ಶಿನಿ ಜ್ಯುವೆಲರ್ಸ್‌ನ ಗೋಡೆ ಕೊರೆದ ದುಷ್ಕರ್ಮಿಗಳು
2.50 ಕೋಟಿ ರೂ. ಮೌಲ್ಯದ 5 ಕೆಜಿ ಚಿನ್ನಾಭರಣ ದೋಚಿದ್ದಾರೆ.ಜೆಪಿನಗರ ಶಾಕಾಂಬರಿ ನಗರದ ನಿವಾಸಿ ರಾಜು ದೇವಾಡಿಗ ಕೊಟ್ಟ ದೂರಿನ ಆಧಾರದ ಮೇಲೆ ಜೆಪಿ ನಗರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ದೆಹಲಿ ಮೂಲದ ಇಬ್ಬರು ಆರೋಪಿಗಳಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ರಾಜು 2010ರಿಂದ ಜೆಪಿನಗರ 1ನೇ ಹಂತದ ಶಾಕಾಂಬರಿ ನಗರದಲ್ಲಿ ಪ್ರಿಯದರ್ಶಿನಿ ಜ್ಯೂವೆಲರ್ಸ್ ಇದ್ದು ದೆಹಲಿ ಮೂಲದ ಇಬ್ಬರು ಆರೋಪಿಗಳು ಪ್ರಿಯದರ್ಶಿನಿ ಜ್ಯುವೆಲರ್ಸ್‌ಗೆ ಹೊಂದಿಕೊಂಡಿರುವ ಪಕ್ಕದ ಮನೆಯ 2ನೇ ಮಹಡಿಯಲ್ಲಿ ಬಾಡಿಯಲ್ಲಿದ್ರು. ಕಳೆದ 1 ತಿಂಗಳ ಹಿಂದೆ ಆರೋಪಿಗಳು ಇಲ್ಲಿ ಮನೆ ಬಾಡಿಗೆಗೆ ಪಡೆದಿದ್ದರು. ನಂತರ ಪ್ರಿಯದರ್ಶಿನಿ ಜ್ಯುವೆಲ್ಲರ್ಸ್‌ಗೆ ಕನ್ನ ಹಾಕಲು ಸಂಚು ರೂಪಿಸಿದ್ದರು. ಅದರಂತೆ ಕಳೆದ 2 ವಾರಗಳಿಂದ ಚಿನ್ನದಂಗಡಿಗೆ ಹೊಂದಿಕೊಂಡಿರುವ ಗೋಡೆಯನ್ನು ಮನೆಯೊಳಗಿನಿಂದ ಹಂತ-ಹಂತವಾಗಿ ಕೊರೆದು ಏ.17ರಂದು ರಾಜು ಜ್ಯುವೆಲ್ಲರ್ಸ್‌ನಲ್ಲಿ ವ್ಯಾಪಾರ ಮುಗಿಸಿ ಚಿನ್ನಾಭರಣಗಳನ್ನು ಕಬ್ಬಿಣದ ಲಾಕರ್‌ನಲ್ಲಿ ಇಟ್ಟು ಹೋಗಿದ್ದರು.
ಇತ್ತ ಗೋಡೆ ಕೊರೆದು ಜ್ಯುವೆಲರಿಯೊಳಗೆ ನುಗ್ಗಿದ ಆರೋಪಿಗಳು, ಮೊದಲಿಗೆ ಅಲ್ಲಿದ್ದ ಸಿಸಿಕ್ಯಾಮರಾ ಸಂಪರ್ಕ ಕಡಿತಗೊಳಿಸಿ, ನಂತರ 2.50 ಕೋಟಿ ರೂ. ಮೌಲ್ಯದ 5 ಕೆ.ಜಿ. ಚಿನ್ನಾಭರಣವನ್ನು ದೋಚಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಬೆರಳಚ್ಚು ಹಾಗೂ ಶ್ವಾನದಳದ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ.
ಆರೋಪಿಗಳು ಬಾಡಿಗೆಗೆ ಪಡೆದಿದ್ದ ಮನೆ ಮಾಲೀಕರ ಬಳಿ ಆರೋಪಿಗಳು ಕೊಟ್ಟ ದಾಖಲೆಗಳನ್ನು ಪರಿಶೀಲಿಸಿದಾಗ ನಕಲಿ ದಾಖಲೆ ಕೊಟ್ಟಿರುವುದು ಪತ್ತೆಯಾಗಿದೆ. ಬಾಡಿಗೆಗೆ ಪಡೆದಿದ್ದ ಮನೆಯ ಮಾಲೀಕರಿಗೆ ದೆಹಲಿ ಹಾಗೂ ಉತ್ತರಾಖಂಡ್‌ನ ವಿಳಾಸದ ನಕಲಿ ಆಧಾರ್ ಕಾರ್ಡ್ ನೀಡಿದ್ದರು ಎಂದು ಗೊತ್ತಾಗಿದೆ.
Kshetra Samachara
21/04/2022 10:47 am