ಬೆಂಗಳೂರು: ನಿನ್ನೆ ಗುರುವಾರ ಬೆಳಿಗ್ಗೆ ಡಿಜೆ ಹಳ್ಳಿಯಲ್ಲಿ ನೇಪಾಳಿ ಮಹಿಳೆ ಮೇಲೆ ಪೈಶಾಚಿಕ ಕೃತ್ಯ ಎಸಗಿದ್ದ ಕಾಮಪಶಾಚಿ ಪೊಲೀಸರ ಕೈಯಿಂದ ಎಸ್ಕೇಪ್ ಆಗಿ 24ಗಂಟೆ ಕಳೆದಿದೆ. ಆರೋಪಿಯ ಬಂಧನಕ್ಕೆ ಈಗಾಗಲೇ ಡಿಜೆ ಹಳ್ಳಿ ಪೊಲೀಸರು ಬಲೆ ಬೀಸಿದ್ದಾರೆ. ಇನ್ನೂ ಸಂತ್ರಸ್ತೆ ವಾಸವಿದ್ದ ಒಂದು ಸಣ್ಣ ರೂಮ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಅವೇಜ್ ಎಂಬುವ ಕಾಮ ಪಿಶಾಚಿಯ ತೋಳತೆಕ್ಕೆಯಿಂದ ತಪ್ಪಿಸಿಕೊಳ್ಳಲು ರೂಂನಲ್ಲಿದ್ದ ಸಂತ್ರಸ್ತೆ ಚೀರಿಕೊಂಡಿದ್ದಳು. ಕೂಡಲೇ ಸ್ಥಳೀಯರು ಆಕೆಯನ್ನು ರಕ್ಷಿಸಿ ಕಾಮ ಕ್ರಿಮಿಯನ್ನು ಹಿಡಿದಿದ್ದಾರೆ.
ನಂತರ ಪೊಲೀಸರಿಗೆ ಸಹ ಒಪ್ಪಿಸಿದ್ದಾರೆ. ಈ ಬಳಿಕ ಆತನನ್ನು ವಶಕ್ಕೆ ಪಡೆದ ಡಿಜೆ ಹಳ್ಳಿ ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಅಂತ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ ಈ ವೇಳೆ ಪೊಲೀಸರ ಕಣ್ತಪ್ಪಿಸಿದ ಆರೋಪಿ ಎಸ್ಕೇಪ್ ಆಗಿದ್ದು, ಆತನ ಪತ್ತೆಗಾಗಿ ವಿಶೇಷ ತಂಡ ರಚಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಇನ್ನು ಅಸಲಿಗೆ ಈ ಅವೇಜ್ ನಗರದ ಪೂರ್ವ ವಿಭಾಗದ ಕುಖ್ಯಾತ ರೌಡಿಯಾಗಿದ್ದು, ಕಮರ್ಷಿಯಲ್ ಸ್ಟ್ರೀಟ್ ಪೊಲೀಸರಿಂದ ಈತನ ವಿರುದ್ಧ ರೌಡಿಶೀಟರ್ ಕೂಡ ಸಹ ತೆರೆಯಲಾಗಿದೆ. ಅಲ್ಲದೇ ಕಳೆದ ಆರು ವರ್ಷದಿಂದ ಡಕಾಯಿತಿ, ಕೊಲೆ ಯತ್ನ ಸೇರಿದಂತೆ 23ಕ್ಕೂ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಈತನ ವಿರುದ್ಧ ಕಳೆದ ವರ್ಷ ಜುಲೈನಲ್ಲಿ ಗಡಿಪಾರು ಆದೇಶ ಸಹ ಮಾಡಲಾಗಿದ್ದು, ಸದ್ಯ ಜಾರಿಯಲ್ಲಿರುವ ಆದೇಶ ಮೀರಿ ಆತ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದಾನೆ. ಅಲ್ಲದೇ ಒಂಟಿ ಮಹಿಳೆಯ ಮೇಲೆ ಈ ರೀತಿ ಕೃತ್ಯ ಎಸಗಿದ್ದು, ಪೊಲೀಸರ ವೈಫಲ್ಯದಿಂದ ಸದ್ಯ ಕಾಲ್ಕಿತ್ತಿದ್ದಾನೆ. ಈತ ಪರಾರಿಯಾದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಈ ಬಗ್ಗೆ ಮಾಹಿತಿ ಕೇಳಿದ್ದಾರೆ.
Kshetra Samachara
01/04/2022 07:09 pm