ಬೆಂಗಳೂರು: ಹೆಂಡ್ತಿ ಕಾಟಕ್ಕೆ ಬೇಸತ್ತು ನಾಪತ್ತೆಯಾಗಿದ್ದ ಪತಿರಾಯನನ್ನು ಏಳು ವರ್ಷಗಳ ಬಳಿಕ ಆಡುಗೋಡಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಉತ್ತರ ಕರ್ನಾಟಕ ಮೂಲದ ಕೋಟೆಪ್ಪ ಪತ್ತೆಯಾಗಿದ್ದ ವ್ಯಕ್ತಿಯಾಗಿದ್ದು ಈ ಹಿಂದೆ ಬೆಂಗಳೂರಿನ ಆಡುಗೋಡಿಯಲ್ಲಿ ವಾಸವಾಗಿದ್ದ. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಈತ 2012ರಲ್ಲಿ ಸವಿತಾ ಎಂಬ ಯುವತಿ ಜೊತೆ ಪ್ರೀತಿಸಿ ಮದುವೆ ಮಾಡಿಕೊಂಡಿದ್ದನಂತೆ.
ಆರಂಭದಲ್ಲಿ ಅನೋನ್ಯವಾಗಿದ್ದ ದಂಪತಿ ಕೆಲ ವರ್ಷಗಳ ಬಳಿಕ ಇವರ ಸಂಸಾರದಲ್ಲಿ ಏರುಪೇರಾಗಿತ್ತು. 2015 ರಲ್ಲಿ ಕೆಲಸಕ್ಕೆ ಎಂದು ಹೋಗಿದ್ದ ಕೋಟೆಪ್ಪ ಏಕಾಏಕಿ ನಾಪತ್ತೆಯಾಗಿದ್ದ. ಪತ್ನಿ ಪೋನ್ ಮಾಡಿದರೂ ಗಂಡನ ಫೋನ್ ಸ್ವಿಚ್ ಆಫ್ ಬಂದಿತ್ತು. ಎಲ್ಲಾ ಕಡೆ ಶೋಧ ನಡೆಸಿದ್ದರೂ ಗಂಡನ ಬಗ್ಗೆ ಮಾಹಿತಿ ಇರಲಿಲ್ಲ. ಆತಂಕದಿಂದಲೇ ಪತ್ನಿ ನೀಡಿದ ದೂರಿನ ಮೇರೆಗೆ ಆಡುಗೋಡಿ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿಕೊಂಡಿದ್ದರು.
ಬೆಂಗಳೂರಿನಿಂದ ನಾಪತ್ತೆಯಾಗಿ ಕೋಟೆಪ್ಪ ಒಡಿಶಾದಲ್ಲಿ ವಾಸಿಸುತ್ತಿದ್ದ. ಕಳೆದ ಒಂದು ವಾರದ ಹಿಂದೆ ಖಾಸಗಿ ಬ್ಯಾಂಕ್ ನಲ್ಲಿ 10 ಸಾವಿರ ಎಫ್ ಡಿ ಮಾಡಿಸಿದ್ದ. ಎಫ್ ಡಿ ಮೆಸೇಜ್ ಹೆಂಡ್ತಿ ಮೊಬೈಲ್ ಗೆ ಬರುತ್ತಿದ್ದಂತೆ ಗಂಡ ಬಂದಿರುವುದನ್ನು ಅರಿತಿದ್ದಳು. ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪತಿ ಕೋಟೆಪ್ಪನನ್ನ ಕರೆತಂದು ವಿಚಾರಣೆಗೊಳಡಪಡಿಸಿದಾಗ ಆಚ್ಚರಿ ಹೇಳಿಕೆ ನೀಡಿದ್ದಾನೆ.
'ನನ್ನ ಹೆಂಡ್ತಿ ಕಾಟ ತಾಳಲಾರದೆ ನಾನು ಮನೆ ಬಿಟ್ಟು ಹೋಗಿದ್ದೆ. ಯಾವುದೇ ಕಾರಣಕ್ಕೂ ಆಕೆಯೊಂದಿಗೆ ಸಂಸಾರ ನಡೆಸಲಾರೆ' ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ. ಸದ್ಯ ಪತಿ ಹೇಳಿಕೆ ಮೇಲೆ ಆಡುಗೋಡಿ ಪೊಲೀಸ್ರು ಮಿಸ್ಸಿಂಗ್ ಕೇಸ್ ಕ್ಲೋಸ್ ಮಾಡಿದ್ದಾರೆ.
Kshetra Samachara
31/03/2022 02:54 pm