ಬೆಂಗಳೂರು: ಬಂಡೆಪಾಳ್ಯದಲ್ಲಿ ಟ್ರ್ಯಾಕ್ಟರ್ ಕದ್ದಿದ್ದ ಅಂತಾರಾಜ್ಯ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಪ್ರದೇಶದ ಪುಲಿವೆಂದುಲ ನಿವಾಸಿ ಶೇಖರ್ ಬಂಧಿತ ಆರೋಪಿ.
ಕೆಲ ವರ್ಷಗಳ ಹಿಂದೆ ನಗರದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದು, ಬಳಿಕ ಊರಿಗೆ ಹೋಗಿದ್ದ. ಕೆಲದಿನಗಳ ಹಿಂದಷ್ಟೇ ರಾಜಧಾನಿಗೆ ಬಂದಿದ್ದ ಆರೋಪಿ, ಬಂಡೆಪಾಳ್ಯದ ಹೊಸಪಾಳ್ಯದಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ನನ್ನ ಕ್ಷಣಮಾತ್ರದಲ್ಲಿ ಎಗರಿಸಿ ಎಸ್ಕೇಪ್ ಆಗಿದ್ದ. ಈ ಸಂಬಂಧ ಬಂಡೆಪಾಳ್ಯ ಪೊಲೀಸ್ ಇನ್ ಸ್ಟೆಕ್ಟರ್ ರಾಜೇಶ್ ನೇತೃತ್ವದ ಕ್ರೈಂ ತಂಡ ಸತತ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.
ಆರೋಪಿಯ ಜಾಡು ಹತ್ತಿದ್ದ ಪೊಲೀಸರಿಗೆ ಕಳ್ಳತನವಾದ ಸ್ಥಳದಿಂದ ಕೆ.ಆರ್.ಪುರಂ, ಹೆಬ್ಬಾಳ, ಬಾಗೇಪಲ್ಲಿ, ಹಿಂದೂಪುರ, ಪುಲಿವೆಂದುಲ ಸಹಿತ ಅನೇಕ ಕಡೆ ಸೆರೆಯಾಗಿದ್ದ 200ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮೆರಾಗಳನ್ನು ಸತತ 15 ದಿನಗಳ ಕಾರ್ಯಾಚರಣೆಯಿಂದ ಶೋಧಿಸಿ, ಕೊನೆಗೆ ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.
ಕದ್ದ ಟ್ರ್ಯಾಕ್ಟರ್ ನಾಮಫಲಕಕ್ಕೆ ಆಂಧ್ರದ ನೋಂದಣಿ ಸಂಖ್ಯೆ ಇರುವ ನಂಬರ್ ಪ್ಲೇಟ್ ಬದಲಾಯಿಸಿ ಅಲ್ಲಿನ ರೈತರೊಬ್ಬರಿಗೆ ಬಾಡಿಗೆ ನೀಡಿದ್ದ. ಸದ್ಯ ಆರೋಪಿಯಿಂದ 5.5 ಲಕ್ಷ ಬೆಳೆಬಾಳುವ ಟ್ರ್ಯಾಕ್ಟರ್ ಹಾಗೂ ಒಂದು ಬೈಕ್ ನ್ನು ಪೊಲೀಸರು ವಶ ಪಡಿಸಿ, ಖದೀಮನನ್ನು ಕಂಬಿ ಹಿಂದೆ ತಳ್ಳಿದ್ದಾರೆ.
PublicNext
29/03/2022 08:42 pm