ದೊಡ್ಡಬಳ್ಳಾಪುರ: ಕೆಎಎಸ್ ಅಧಿಕಾರಿ ಕೆ.ರಂಗನಾಥ್ ಅವರಿಗೆ ಸಂಬಂಧಿಸಿದ ಮನೆ, ಟ್ರಸ್ಟ್ ಸೇರಿದಂತೆ 5 ಕಡೆ ಏಕ ಕಾಲದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ರಂಗನಾಥ್ ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿಯಾಗಿದ್ದು, ಸದ್ಯ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ನಿಯಮಿತ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಬೆಂಗಳೂರು ಉತ್ತರ ತಾಲೂಕಿನ ಉಪವಿಭಾಗಧಿಕಾರಿಯಾಗಿದ್ದ ಕೇವಲ ಮೂರು ದಿನಗಳ ಅವಧಿಯಲ್ಲಿ ಸರ್ಕಾರದ ಸುರ್ಪದಿಯಲ್ಲಿದ್ದ ಜಮೀನುಗಳ ಮೂಲ ಮಂಜೂರಾತಿ ದಾಖಲೆಗಳ ಪರಿಶೀಲನೆ ಮಾಡದೆ ಮತ್ತು ಸಂಬಂಧಪಟ್ಟ ತಹಶೀಲ್ದಾರ್ ಅವರಿಂದ ಯಾವುದೇ ವರದಿ ಪಡೆಯದೆ ಕಾನೂನು ಬಾಹಿರವಾಗಿ ಖಾಸಗಿ ವ್ಯಕ್ತಿಗಳಿಗೆ ಜಮೀನು ಪರಭಾರೆ ಮಾಡಿಕೊಟ್ಟಿದ್ದರು. ಇದಕ್ಕೆ ಸಂಬಂಧಪಟ್ಪಂತೆ ದೂರು ಬಂದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇಂದು ಮುಂಜಾನೆ 6 ಗಂಟೆ ಸಮಯದಲ್ಲಿ ರಂಗನಾಥ್ ಅವರಿಗೆ ಸಂಬಂಧಿಸಿದ ಯಲಹಂಕದ ನ್ಯಾಯಾಂಗ ಬಡಾವಣೆಯಲ್ಲಿರುವ ಮನೆ, ದೊಡ್ಡಬಳ್ಳಾಪುರದ ಚೈತನ್ಯನಗರದ ಮನೆ, ದೊಡ್ಡಬಳ್ಳಾಪುರ ನಗರದ ಕನಕಶ್ರೀ ಟ್ರಸ್ಟ್ ಕಚೇರಿ ಮತ್ತು ಪಬ್ಲಿಕ್ ಶಾಲೆ, ನಾಗರಬಾವಿಯಲ್ಲಿರುವ ಸಂಬಂಧಿಕರ ಮನೆ , ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಬೆಂಗಳೂರು ಉತ್ತರ ತಾಲೂಕಿನ ಉಪವಿಭಾಗಧಿಕಾರಿ ಕಚೇರಿ ಸೇರಿದಂತೆ ಒಟ್ಟು 5 ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಟ್ಟು 42 ಅಧಿಕಾರಿಗಳು ಮತ್ತು ಸಿಬ್ಬಂದಿ ಒಳಗೊಂಡ 5 ತಂಡ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
PublicNext
25/03/2022 09:20 am