ಬೆಂಗಳೂರು: ಮದುವೆಯಾಗುವಂತೆ ಕೇಳಿದ್ದಕ್ಕೆ ಯುವತಿ ಮೇಲೆ ಪ್ರಿಯಕರ ಪೆಟ್ರೋಲ್ ಸುರಿದು ಹತ್ಯೆಗೈದಿರುವ ಘಟನೆ ನಗರದ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ. ಮೃತ ದುರ್ದೈವಿ ದಾನೇಶ್ವರಿ (23) ಎಂದು ಗುರುತಿಸಲಾಗಿದೆ.
ಇನ್ನು ಶಿವಕುಮಾರ್ ಹಾಗೂ ದಾನೇಶ್ವರಿ ವಿಜಯಪುರ ಮೂಲದವರು ಎಂಜಿನಿಯರಿಂಗ್ ಓದುವ ವೇಳೆ ದಾನೇಶ್ವರಿ ಅವರು ಎಲೆಕ್ಟ್ರಾನಿಕ್ ಸಿಟಿ ಬಳಿಯ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶಿವಕುಮಾರನನ್ನು ಪ್ರೀತಿಸುತ್ತಿದ್ದರು. ಇತ್ತೀಚಿಗಷ್ಟೇ ದಾನೇಶ್ವರಿ ಅವರು ಪ್ರಿಯಕರ ಶಿವಕುಮಾರನನ್ನು ಮದುವೆಯಾಗುವಂತೆ ಕೇಳಿದ್ದಾರೆ. ಆದರೆ ಜಾತಿ ಕಾರಣ ನೀಡಿ ಮದುವೆಯಾಗಲು ಶಿವಕುಮಾರ್ ನಿರಾಕರಿಸಿದ್ದಾನೆ. ಅಲ್ಲದೇ ಮದುವೆಯಾಗಲ್ಲ, ಬೇಕಿದ್ದರೆ ನಿನ್ನನ್ನು ಸಾಯಿಸುತ್ತೇನೆ ಎಂದು ಬೆದರಿಕೆಯೊಡ್ಡಿದ್ದ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮದುವೆ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಮೂವರು ಯುವಕರು ಹಿಂದಿನಿಂದ ಬಂದು ದಾನೇಶ್ವರಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಕೂಡಲೇ ಗಾಯಗೊಂಡ ದಾನೇಶ್ವರಿ ಅವರನ್ನು ಕೂಡ್ಲು ಬಳಿಯ ಮಾತಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ದಾನೇಶ್ವರಿ ಸಾವನ್ನಪ್ಪಿದ್ದಾರೆ. ಇದೀಗ ಈ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಎಸ್‌ಸಿ, ಎಸ್‌ಟಿ ಕಾಯ್ದೆ, IPC ಸೆಕ್ಷನ್ 302 ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಯುವತಿ ತಂದೆ ಅಶೋಕ್ ಶರ್ಮ, ದಾನೇಶ್ವರಿಗೆ ಮದುವೆ ಮಾಡಲು ಸಿದ್ದತೆ ನಡೆಸಿದ್ದೆವು. ಆದರೆ ಈ ವೇಳೆ ತನ್ನ ಪ್ರೇಮದ ವಿಚಾರ ಹೇಳಿದಳು. ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುವಾಗ ಪ್ರೀತಿ ಮಾಡಿದ್ದಾರೆ. ನಾನು ಅವನನ್ನೇ ಮದುವೆಯಾಗುತ್ತೇನೆ, ಆದರೆ ಅವನು ಒಪ್ಪುತ್ತಿಲ್ಲ. ಮದುವೆಯಾಗಲು ಕೇಳಿದಾಗ ಜಾತಿ ವಿಚಾರ ಹೇಳಿದ್ದಾನೆ. ಹುಡುಗ ಶಿವಕುಮಾರ್ ಬಾದಾಮಿ ಮೂಲದವನು. ನಿನ್ನ ಮದುವೆಯಾದರೆ ನನ್ನ ತಾಯಿ ತಂದೆ ಸೇರಿಸುವುದಿಲ್ಲ ಮಗಳು ಹೇಳಿದ್ದಳು ಎಂದಿದ್ದಾರೆ.
ನಮ್ಮ ಹುಡುಗಿ ಕೆಲಸಕ್ಕೆ ಸೇರಲು ಕೋರ್ಸ್ ಮಾಡುತ್ತಿದ್ದಳು. ಹಾಗಾಗಿ ಬಿಟಿಎಂ ಲೇಔಟ್‌ನ ಪಿ.ಜಿಯಲ್ಲಿ ವಾಸವಿದ್ದಳು. ಇದೇ ತಿಂಗಳ 16ರಂದು ರಾತ್ರಿ ಈ ಘಟನೆ ವಿಚಾರ ನಮಗೆ ತಿಳಿದುಬಂದಿತ್ತು. ಅಲ್ಲಿಂದ ಕೂಡಲೇ ಆಸ್ಪತ್ರೆಗೆ ದುಡ್ಡು ಕಳಿಸಿ ಚಿಕಿತ್ಸೆ ನೀಡಲು ತಿಳಿಸಿದ್ದೆ. ಪೊಲೀಸರು ಆಕೆನೇ ಪೆಟ್ರೋಲ್ ಹಾಕಿಕೊಂಡಿದ್ದಾಳೆ ಎಂದು ಹೇಳುತ್ತಿದ್ದಾರೆ. ಆದರೆ ಶಿವಕುಮಾರ್ ಮೈನ್ ರೋಡ್ ಖಾಲಿ ಜಾಗದಲ್ಲಿ ಪೆಟ್ರೋಲ್ ಹಾಕಿದ್ದಾನೆ. ಅವನೇ ಬಂದು ಆಸ್ಪತ್ರೆಗೆ ಸೇರಿಸಿ ನಮ್ಮ ನಂಬರ್ ಕೊಟ್ಟಿದ್ದಾನೆ ಎಂದು ಯುವತಿಯ ತಂದೆ ಆರೋಪಿಸಿದ್ದಾರೆ.
PublicNext
18/03/2022 02:40 pm