ಬೆಂಗಳೂರು: ಮನುಷ್ಯ ಹಣಕ್ಕಾಗಿ ಏನೂ ಬೇಕಾದ್ರೂ ಮಾಡ್ತಾನೆ ಎಂಬ ಮಾತಿದೆ. ಆದ್ರೆ ಕೇವಲ 500ರೂಪಾಯಿ ಹಣಕ್ಕೆ ವ್ಯಕ್ತಿ ಕೊಲೆ ಆಗುತ್ತೆ ಅಂದ್ರೆ ನಿಜಕ್ಕೂ ದುರಂತ ಎಂದೇ ಹೇಳಬೇಕು.
ಯೆಸ್.. ಕಳೆದ ಫೆ. 25ರಂದು ಮಾಗಡಿ ರಸ್ತೆಯಲ್ಲಿ ಕಾಮಾಕ್ಷಿಪಾಳ್ಯದ ಶ್ರೀನಿವಾಸ ಬಾರ್ ಮುಂದೆ ವ್ಯಕ್ತಿ ಮೇಲೆ ಸಿಮೆಂಟ್ ಬ್ಲಾಕ್ ಹಾಕಿ ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ ಕಾಮಕ್ಷಿಪಾಳ್ಯ ಪೊಲೀಸರು ಕೊನೆಗೂ ಕೊಲೆ ಆರೋಪಿ ಸಬಾಸ್ಟಿ ಎಂಬಾತನನ್ನ ಬಂಧಿಸಿದ್ದಾರೆ. ದುರಂತ ಅಂದ್ರೆ ಇಲ್ಲಿ ಸತೀಶ ಎಂಬಾತ ಕೊಲೆಯಾಗಿದ್ದು ಕೇವಲ 500ರೂಪಾಯಿ ಹಣ ಮತ್ತು ಒಂದು ಕೀಪ್ಯಾಡ್ ಮೊಬೈಲ್‌ಗೆ.
ಆ ದಿನ ಕೊಲೆಯಾದ ಸತೀಶ ಸ್ನೇಹಿತನ ಜೊತೆ ಸೇರಿ ಕಂಠ ಪೂರ್ತಿ ಕುಡಿದು ಫುಟ್‌ಪಾತ್ ಮೇಲೆ ಮಲಗಿದ್ದ. ಇತ್ತ ಮಧ್ಯರಾತ್ರಿ ವೇಳೆ ಆರೋಪಿ ಸಬಾಸ್ಟಿ ಕೂಡ ಟೈಟ್ ಆಗಿ ಸತೀಶ್ ಕೈ ಕಟ್ಟಿ ಜೇಬಲ್ಲಿ ಏನಾದ್ರೂ ಇದ್ಯಾ ಅಂತ ಚೆಕ್ ಮಾಡಿದ್ದ. ಜೇಬಲ್ಲಿ ಐನೂರು ರೂಪಾಯಿ ಹಣ ಮತ್ತು ಒಂದು ಹಳೇ ಕೀಪ್ಯಾಡ್ ಮೊಬೈಲ್ ಸಿಕ್ಕಿತ್ತು. ಸಿಕ್ಕಿದ್ದೇ ಸೈ ಅಂತ ಅಬೇಸ್ ಮಾಡೋ ಅಷ್ಟರಲ್ಲೇ ಸತೀಶ ಎಚ್ಚರ ಆಗಿದ್ದ. ಅಷ್ಟಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದುಕೊಂಡ ಸಬಾಸ್ಟಿ, ಸತೀಶನ ತಲೆಮೇಲೆ ಕಲ್ಲು ಹಾಕಿ ಅವನ ಕತೆ ಮುಗಿಸಿ ಅಲ್ಲಿಂದ ಕಾಲ್ಕಿತ್ತಿದ್ದ.
ಸದ್ಯ ಮೊಬೈಲ್ ಎಸೆದು ಹಣ ಖರ್ಚು ಮಾಡಿಕೊಂಡಿದ್ದ ಆರೋಪಿ ಕೊನೆಗೂ ಜೈಲು ಸೇರಿದ್ದಾನೆ. ಆದ್ರೆ ಕೇವಲ 500ರೂಪಾಯಿಗೆ ಒಂದು ಜೀವ ಮಾತ್ರ ಮಸಣ ಸೇರಿದೆ.
PublicNext
08/03/2022 10:31 pm