ಬೆಂಗಳೂರು: ಆ ದಿನ ಮನೆಯಲ್ಲಿ ಪತ್ನಿ ಅಸ್ವಸ್ಥಳಾಗಿದ್ದಾಳೆ ಅಂತ ಓನರ್ ಗೆ ತಿಳಿಸಿ, ಆಟೋದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದ. ಆಸ್ಪತ್ರೆಯಲ್ಲಿ ಡಾಕ್ಟರ್, ಆಕೆ ಸತ್ತಿದ್ದಾಳೆ ಅಂತ ಕನ್ಫರ್ಮ್ ಮಾಡಿದ್ರು. ಇತ್ತ ಪೊಲೀಸ್ರೂ ಅಸಹಜ ಸಾವು ಅಂತ ಕೇಸ್ ಬುಕ್ ಮಾಡಿ ಸುಮ್ಮನಾದ್ರು.
ಎಸ್. ಪೋಸ್ಟ್ ಮಾರ್ಟಮ್ ನಲ್ಲಿ ಮಹಿಳೆ ಸಾವಿಗೆ ಅಸಲಿ ಕಾರಣ ಪೊಲೀಸ್ರಿಗೆ ವೈದ್ಯರು ತಿಳಿಸ್ತಾರೆ. ಅಸಲಿಗೆ ಮಹಿಳೆ ಸಾವು ಸಹಜ ಅಲ್ಲ, ಆಕೆಯ ಕೊಲೆ ಆಗಿದೆ ಎಂದು ಡಾಕ್ಟರ್ ರಿಪೋರ್ಟ್ ಕೊಡ್ತಾರೆ. ಅದು ತೊಡೆ, ಪಕ್ಕೆಲುಬಿಗೆ ಬಲವಾಗಿ ಪೆಟ್ಟು ಬಿದ್ದು ಮೂಳೆ ಮುರಿದು ಮಹಿಳೆ ಸತ್ತಿದ್ದಾಳೆ ಅಂತ ಪಿಎಂ ರಿಪೋರ್ಟ್ ಹೇಳಿದೆ. ಇಲ್ಲಿಂದ ಕೊಲೆ ಕೇಸ್ ಆಗಿ ಕನ್ವರ್ಟ್ ಮಾಡಿಕೊಂಡ ಕೋಣನಕುಂಟೆ ಪೊಲೀಸ್ರು ತನಿಖೆ ಶುರು ಮಾಡ್ತಾರೆ.
ಆಕೆಯನ್ನು ಆಸ್ಪತ್ರೆಗೆ ಸೇರಿಸಿದ ಗಂಡನನ್ನು ಹುಡುಕಲು ಪೊಲೀಸ್ರು ಮುಂದಾಗ್ತಾರೆ. ಆಗ್ಲೆ ಗೊತ್ತಾಗಿದ್ದು ಆಸ್ಪತ್ರೆಗೆ ಸೇರಿಸಿದ್ದು ಗಂಡ ಅಲ್ಲ, ಪ್ರಿಯಕರ ಅಂತ! ಪ್ರೇಯಸಿ ಮಂಜುಳಾನ ಎಣ್ಣೆ ನಶೆಯಲ್ಲಿ ಕೊಲೆ ಮಾಡಿ ಊರು ಬಿಟ್ಟಿದ್ದ ಮಳ್ಳವಳಿಯ ಮಂಜುನಾಥ್ ನನ್ನು ಬಂಧಿಸಿದ ಪೊಲೀಸರು ತಮ್ಮದೇ ಸ್ಟೈಲ್ ನಲ್ಲಿ ವರ್ಕ್ ಮಾಡಿದ್ರು. ಇಲ್ಲಿ ಕೊಲೆಯ ಅಸಲಿಯತ್ತನ್ನು ಎಳೆಎಳೆಯಾಗಿ ಬಾಯಿಬಿಟ್ಟ ಮಂಜ.
"ಸಾರ್, ನನಗೆ ಮದುವೆ ಆಗಿಲ್ಲ. ಈ ಮಂಜುಳಾ ಮದುವೆ ಆಗಿ ಗಂಡನಿಂದ ದೂರ ಇದ್ಳು, ಈಕೆಗೆ ಬಾಳು ಕೊಡಬೇಕು ಅಂತ ಜೊತೆಗಿದ್ದೆ. ಆದ್ರೆ, ಈಕೆ ನನ್ನ ಬಿಟ್ಟು ಬೇರೆಯವನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ಳು. ಹಲವು ಬಾರಿ ಬುದ್ಧಿ ಹೇಳಿದ್ರೂ ನನ್ನ ಮಾತು ಕೇಳಲಿಲ್ಲ. ಕಳೆದ 6ನೇ ದಿನಾಂಕದಂದು ಇಬ್ಬರೂ ಸೇರಿ ಡ್ರಿಂಕ್ಸ್ ಮಾಡಿದ್ವಿ.
ಈ ವೇಳೆ ಇದೇ ವಿಚಾರಕ್ಕೆ ಜಗಳವಾಗಿ ಕೋಪದಿಂದ ಸುತ್ತಿಗೆಯಲ್ಲಿ ಹೊಡೆದೆ. ಜ್ಞಾನ ತಪ್ಪಿ ಬಿದ್ಳು, ರಾತ್ರಿಯಿಡೀ ಕಾದರೂ ಎಚ್ಚರ ಆಗಲಿಲ್ಲ. ಮನೆ ಕ್ಲೀನ್ ಮಾಡಿ, ಆಕೆಗೂ ಸ್ನಾನ ಮಾಡಿಸಿ, ಬಟ್ಟೆ ಬದಲಿಸಿ ಆಸ್ಪತ್ರೆಗೆ ಸೇರಿಸಿದೆ!" ಎಂದ ಮಂಜ.
ಇನ್ನು, ಇಬ್ಬರು ಮಕ್ಕಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟಿದ್ದ ಮಂಜುಳಾ, ಖಾಸಗಿ ಕಂಪೆನಿಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ಳು. ಮಂಜನೂ ಖಾಸಗಿ ಕಂಪನಿ ಉದ್ಯೋಗಿಯಾಗಿದ್ದು, ಈಗ ಪರಪ್ಪನ ಅಗ್ರಹಾರ ಸೇರಿದ್ದಾನೆ.
PublicNext
13/01/2022 09:37 pm