ಸುರೇಶ್ ಬಾಬು Public Next ಯಲಹಂಕ
ಯಲಹಂಕ: ಆತ ಸ್ಫೂರದ್ರೂಪಿ, ಒಳ್ಳೆಯ ಸರ್ಕಾರಿ ಕೆಲಸದ ಜೊತೆಗೆ ಚೆನ್ನಾದ ಮನೆ ಎಲ್ಲವೂ ಇತ್ತು. ಆದರೆ, ಸೂಕ್ತ ದಾಖಲೆ ಇಲ್ಲದೆ ಸೈಟ್ ನನ್ನದೆಂದು ಬೇರೊಬ್ಬರ ಮನೆ ನೆಲಸಮ ಮಾಡಿ, ವಿಲನ್ ರೀತಿ ಈಗ ಜೈಲು ಸೇರಿದ್ದಾನೆ! ಏನ್ ಈ ಸೈಟ್ ಫೈಟ್ ಅಂತೀರಾ, ಇಲ್ಲಿದೆ ನೋಡಿ ಡೀಟೇಲ್ಸ್...
ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ಕೆಂಪೇಗೌಡ ವಾರ್ಡ್ 1ರ ಮಾರುತಿನಗರ 8ನೇ ಕ್ರಾಸ್ ನ 246ನೇ ನಂಬರ್ ಸೈಟ್ ಇದಾಗಿದ್ದು ನೂರ್ ಅಹ್ಮದ್ ಗೆ ಸೇರಿದ ನಿವೇಶನ. ಈ ನಿವೇಶನದಲ್ಲಿ ನೂರ್ ಅಹ್ಮದ್ ಸಂಬಂಧಿ ಬಾಬು 6 ಲಕ್ಷ ಬೆಲೆಯ ಶೀಟ್ ಮನೆ ಕಟ್ಟಿಕೊಂಡು ಕುಟುಂಬದೊಂದಿಗೆ 4 ವರ್ಷಗಳಿಂದ ವಾಸವಿದ್ದಾರೆ. ಆದರೆ, ಯಲಹಂಕ K.E.B. ಜ್ಯೂನಿಯರ್ ಎಂಜಿನಿಯರ್ ಶ್ರೀನಿವಾಸಮೂರ್ತಿ ಇದು 244ರ ನಿವೇಶನಕ್ಕೆ ಸೇರಿದ ಜಾಗ ಎಂದು ಗಲಾಟೆ ಮಾಡುತ್ತಿದ್ದ.
ಈ ಸಂಬಂಧ ಕೋರ್ಟ್ ನಲ್ಲಿ ಕೇಸ್ ದಾಖಲಾಗಿ ವಿಚಾರಣೆ ನಡೆಯುತ್ತಿದೆ. ಈ 246 ಸೈಟ್ ವಿಚಾರವಾಗಿ ಅನೇಕ ಸಲ ನೂರ್ ಅಹ್ಮದ್ ಮತ್ತು ಶ್ರೀನಿವಾಸಮೂರ್ತಿ ನಡುವೆ ಜಗಳವಾಗಿ ಯಲಹಂಕ ಪೊಲೀಸರು ಕೋರ್ಟ್ ತೀರ್ಮಾನದಂತೆ ನಡೆದುಕೊಳ್ಳಿ ಎಂದು ಬುದ್ಧಿ ಹೇಳಿ ಕಳುಹಿಸಿದ್ದರು. ಆದರೆ. ಡಿ. 25ರಂದು ಶ್ರೀನಿವಾಸ ಮೂರ್ತಿ R.X. ಮಂಜ ಎಂಬಾತನೊಂದಿಗೆ ಜೆಸಿಬಿ ಸಹಿತ ಬಂದು ಮನೆ ನೆಲಸಮ ಮಾಡಿಯೇ ಬಿಟ್ಟಿದ್ದಾನೆ!. ಇದರಿಂದ ಬಾಬು, ಯಲಹಂಕ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ಸಂಬಂಧ ಶ್ರೀನಿವಾಸ ಮೂರ್ತಿಯನ್ನು ಪೊಲೀಸರು ಬಂಧಿಸಿ, ಜೈಲಿಗೆ ಅಟ್ಟಿದ್ದಾರೆ.
ಯಲಹಂಕದ ವೆಂಕಟಾಚಲ ಗ್ರಾಮದ ಸರ್ವೆ ನಂಬರ್ 10/1, 60/1 & 60/2 ಕ್ಕೆ ಸೇರಿದ ಜಮೀನುಗಳಲ್ಲಿ 1970ರಲ್ಲಿ ಯಲಹಂಕ ಮುನಿಸಿಪಲ್ ಟೌನ್ "ಮಾರುತಿ ಬಡವರ ಗೃಹ ನಿರ್ಮಾಣಕಾರರ ಸೇವಾ ಸಂಘ"ಕ್ಕೆ ನಿವೇಶನ ಮಾಡಿ ವಿಂಗಡಿಸಿತ್ತು. ಇದರಂತೆ ನಿವೇಶನ ಪಡೆದ ಶಂಕರಪ್ಪ ತನ್ನ ಮಗ ಕುಮಾರ್ ಗೆ ಸೈಟ್ ನ ದಾನಪತ್ರ ಮಾಡಿಕೊಟ್ಟಿದ್ದರು. ಈ ಸೈಟನ್ನು 2019ರಲ್ಲಿ ತುಮಕೂರಿನ ನೂರ್ ಅಹ್ಮದ್ ಖರೀದಿಸಿ ಶೀಟ್ ಮನೆ ಕಟ್ಟಿ ಸಂಬಂಧಿಕರನ್ನು ಇರಿಸಿದ್ದರು. ಶ್ರೀನಿವಾಸ ಮೂರ್ತಿಯೂ ಸಹ 244ನೇ ಸೈಟನ್ನು ಖರೀದಿಸಿ ಈ ಜಾಗ ತನ್ನದೆಂದು ಬಂದಿದ್ದ. ಯಾವಾಗ ನೂರ್ ಅಹ್ಮದ್ ಸೈಟ್ ಖರೀದಿ ಮಾಡಿದರೊ ಅಂದಿನಿಂದ 246, 244ನೇ ನಂಬರ್ ಸೈಟ್ ಗಾಗಿ ಜಗಳವಾಗುತ್ತಿದೆ. ಸದ್ಯ ನಿವೇಶನದ ಮೂಲ ವಾರೀಸುದಾರರ ಕುರಿತ ಪ್ರಕರಣ ಕೋರ್ಟ್ ನಲ್ಲಿದ್ದ ವೇಳೆ ಹೀಗೆ ಅತಿಕ್ರಮ ಪ್ರವೇಶ ಸರಿಯೇ ಎನ್ನುತ್ತಾರೆ ಹೋರಾಟಗಾರರು.
PublicNext
04/01/2022 07:45 pm