ಕೆ.ಆರ್. ಪುರ: ಡಿಸೆಂಬರ್ 19ರ ಆ ಮಧ್ಯರಾತ್ರಿ 11:50ರ ಸುಮಾರಿಗೆ ಕೆ.ಆರ್.ಪುರ ಪೊಲೀಸ್ ಠಾಣೆ ವ್ಯಾಪ್ತಿಯ ವಿನಾಯಕ ಲೇಔಟ್ ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಯನ್ನು ಓಮ್ನಿ ಕಾರಿನಲ್ಲಿ ಬಂದ ತಂಡವೊಂದು ಬಲವಂತವಾಗಿ ಕರೆದೊಯ್ಯುತ್ತಾರೆ! ಇದನ್ನು ಕಂಡ ಸಾರ್ವಜನಿಕರು 112ಕ್ಕೆ ಕರೆ ಮಾಡಿ ಮಾಹಿತಿ ನೀಡುತ್ತಾರೆ. ತಕ್ಷಣ ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ತನಿಖೆ ಕೈಗೊಳ್ಳುತ್ತಾರೆ.
ಸ್ಥಳದಲ್ಲಿದ್ದ ಸಿಸಿ ಟಿವಿ ಕ್ಯಾಮೆರಾ ಪರಿಶೀಲಿಸಿದಾಗ ವ್ಯಕ್ತಿಯನ್ನು ಕರೆದೊಯ್ದ ಘಟನೆ ಕಿಡ್ನ್ಯಾಪ್ ಮಾದರಿ ಇದ್ದ ಕಾರಣ ಆ ಕ್ಷಣವೇ ಪೊಲೀಸರು, ಕಾರಿನ ನಂಬರ್ ಟ್ರೇಸ್ ಮಾಡಿದ್ದಾರೆ. ಅಲ್ಲಿಗೇ ನಿಟ್ಟುಸಿರೂ ಬಿಟ್ಟಿದ್ದಾರೆ! ಯಾಕೆಂದರೆ ಇದೇ ಕಾರಿನಲ್ಲಿ 2 ತಿಂಗಳ ಹಿಂದೆ ಓರ್ವ ಯುವಕನನ್ನು ಬಲವಂತವಾಗಿ ಕರೆದೊಯ್ಯಲಾಗಿತ್ತು. ಕಿಡ್ನ್ಯಾಪ್ ಆಗಿದೇ ಅಂತಲೇ ತಲೆ ಕೆಡಿಸಿ, ಹುಡುಕಾಡಿದ್ದ ಪೊಲೀಸರಿಗೆ ತಿಳಿದ ವಿಷಯ ಏನೆಂದರೆ ಹೊಸಕೋಟೆ ಬಳಿಯ ರಿಹ್ಯಾಬ್ಲಿಟೇಷನ್ ಸೆಂಟರ್ ನ ಕಾರು ಅದಾಗಿತ್ತು.
ಈ ಬಗ್ಗೆ ವಿಚಾರಿಸಿದಾಗ 35 ವರ್ಷದ ಯುವಕ ಕುಡಿತದ ದಾಸನಾಗಿದ್ದ. ಆದ್ದರಿಂದ ಕುಟುಂಬಸ್ಥರು ರಿಹ್ಯಾಬ್ಲಿಟೇಷನ್ ಸೆಂಟರ್ ಗೆ ದಾಖಲಿಸಲು ಹಲವು ಬಾರಿ ಪ್ರಯತ್ನಿಸಿದರೂ ತಪ್ಪಿಸಿಕೊಂಡು ಹೋಗ್ತಿದ್ದ. ಈ ಬಾರಿ ಯುವಕನನ್ನು ಕುಟುಂಬಸ್ಥರು ಬಲವಂತವಾಗಿಯೇ ಕಾರಿನಲ್ಲಿ ಕೂರಿಸಿ, ಕರೆ ತಂದರು ಎಂದು ರಿಹ್ಯಾಬ್ಲಿಟೇಷನ್ ಸಿಬ್ಬಂದಿ, ಪೊಲೀಸರಿಗೆ ವಾಸ್ತವಾಂಶ ತಿಳಿಸಿದ್ದಾರೆ.
PublicNext
26/12/2021 06:47 pm