ದೊಡ್ಡಬಳ್ಳಾಪುರ: ಬಿಬಿಎಂಪಿ ಕಸದ ವಿರುದ್ಧ12 ದಿನಗಳಿಂದ ಹೋರಾಟ ನಡೆಯುತ್ತಿದ್ದು, ಈ ಹೋರಾಟವನ್ನು ಹಂತ ಹಂತವಾಗಿ ಹತ್ತಿಕ್ಕುವ ಪ್ರಯತ್ನದಲ್ಲಿರುವ ಪೊಲೀಸರು ಹೋರಾಟದ ನೇತೃತ್ವ ವಹಿಸಿರುವ ಸಾರಥಿ ಸತ್ಯಪ್ರಕಾಶ್ ಅವರನ್ನು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಚಿಗರೇನಹಳ್ಳಿಯಲ್ಲಿ ಎಂಎಸ್ ಜೆಪಿ ಘಟಕದಲ್ಲಿ ಬಿಬಿಎಂಪಿ ಕಸ ಸುರಿಯಲಾಗುತ್ತಿದ್ದು, ಕಸದಿಂದ ರೋಸಿ ಹೋಗಿರುವ 4 ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಧರಣಿ ನಡೆಸುತ್ತಿದ್ದಾರೆ. ಹೋರಾಟ 12 ದಿನಕ್ಕೆ ಬಂದಿದ್ದು, ನಿನ್ನೆ ಪ್ರತಿಭಟನೆ ಸ್ಥಳಕ್ಕೆ ಬಂದಿದ್ದ 300 ಪೊಲೀಸರು 50ಕ್ಕೂ ಹೆಚ್ಚು ಹೋರಾಟಗಾರರನ್ನು ಬಂಧಿಸಿ ರಾಜಾನುಕುಂಟೆಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಕೂಡಿಟ್ಟು, ಒಮಿಕ್ರಾನ್ ನೆಪ ಹೇಳಿ ಪ್ರತಿಭಟನೆ ಮಾಡದಂತೆ ಎಚ್ಚರಿಕೆ ನೀಡಿ ಹೋರಾಟಗಾರರನ್ನು ಕಳುಹಿಸಿದ್ದರು.
ಎಂಎಸ್ ಜೆಪಿ ಘಟಕ ಮುಚ್ಚುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲವೆಂದು ಇಂದು ಬೆಳಗ್ಗೆ ತಣ್ಣೀರಹಳ್ಳಿಯಲ್ಲಿ ಧರಣಿ ಮುಂದುವರೆಸಲಾಗಿತ್ತು. ಧರಣಿ ಸ್ಥಳಕ್ಕೆ ಬಂದ ಭಕ್ತರಹಳ್ಳಿ ಗ್ರಾಪಂ ಅಧ್ಯಕ್ಷ ಸಿದ್ದಲಿಂಗಯ್ಯನವರನ್ನು ಬಂಧಿಸಿ ಅಜ್ಞಾತ ಸ್ಥಳದಲ್ಲಿ ಇರಿಸಿದ್ದಾರೆ. ಪೊಲೀಸ್ ಅಧಿಕಾರಿಗಳನ್ನು ವಿಚಾರಿಸಿದರೂ ಸಿದ್ದಲಿಂಗಯ್ಯ ಎಲ್ಲಿದ್ದಾರೆಂಬ ಮಾಹಿತಿ ನೀಡುತ್ತಿಲ್ಲ. ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಸಿದ್ದಲಿಂಗಯ್ಯನವರ ಬಗ್ಗೆ ಮಾಹಿತಿ ಅರಿಯಲು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಗೆ ಸಾರಥಿ ಸತ್ಯ ಪ್ರಕಾಶ್ ಬಂದಿದ್ದಾರೆ. ಆದರೆ, ಬಲವಂತದಿಂದ ಸಾರಥಿ ಸತ್ಯ ಪ್ರಕಾಶ್ ಮತ್ತು ಜಿ.ಎನ್ .ಪ್ರದೀಪ್ ಅವರನ್ನು ಬಂಧಿಸಿ, ಠಾಣೆಗೆ ಕರೆದು ಕೊಂಡು ಹೋಗಿದ್ದಾರೆ.
Kshetra Samachara
05/12/2021 05:34 pm