ಕೆಲಸ ಮಾಡುತ್ತಿದ್ದ ಜ್ಯುವೆಲ್ಲರಿ ಶಾಪ್ ನಲ್ಲಿ ಚಿನ್ನ ಕದ್ದು ಕಾರು ಖರೀದಿಸಿ ಶೋಕಿ ಮಾಡುತ್ತಿದ್ದ ಸೇಲ್ಸ್ ಮ್ಯಾನ್ ಸೇರಿ ಇಬ್ಬರನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ. ಚೇತನ್ ನಾಯ್ಡು ಹಾಗೂ ವಿಜಯ್ ಬಂಧಿತರು. ಆರೋಪಿಗಳಿಂದ 3.72 ಲಕ್ಷ ಮೌಲ್ಯದ ಚಿನ್ನ, 99 ಸಾವಿರ ನಗದು ಹಾಗೂ ಒಂದು ಕಾರು ಹಾಗೂ ಬೈಕ್ ಜಪ್ತಿ ಮಾಡಿಕೊಳ್ಳಲಾಗಿದೆ.
ಯಶವಂತಪುರದ ಒಂದನೇ ಮುಖ್ಯರಸ್ತೆಯಲ್ಲಿರುವ ದಿ ಬೆಸ್ಟ್ ಜ್ಯುವೆಲ್ಲರಿ ಶಾಪ್ ನಲ್ಲಿ ನಾಲ್ಕು ವರ್ಷಗಳಿಂದ ಸೇಲ್ಸ್ ಮ್ಯಾನ್ ಆಗಿ ಚೇತನ್ ನಾಯ್ಡು ಕೆಲಸ ಮಾಡುತ್ತಾ ಮಾಲೀಕರ ವಿಶ್ವಾಸ ಸಂಪಾದಿಸಿಕೊಂಡಿದ್ದ. ಶಾಪ್ ನಲ್ಲಿ ಯಾರೂ ಇಲ್ಲದಿರುವಾಗ ಸಣ್ಣ ಪ್ರಮಾಣದ ಚಿನ್ನ ಕದಿಯುತ್ತಿದ್ದ. ಕಳ್ಳತನದ ಬಳಿಕ ಮಾರಾಟವಾಗಿದೆ ಎಂದು ಲೆಕ್ಕಪತ್ರದಲ್ಲಿ ನಮೂದಿಸುತ್ತಿದ್ದ. ಕಳೆದ ಒಂದು ವರ್ಷದಿಂದ ಇದೇ ರೀತಿ ಕಳ್ಳತನ ಮಾಡುತ್ತಿದ್ದ.
ಇತ್ತೀಚೆಗೆ ಗ್ರಾಹಕರೊಬ್ಬರು ಚಿನ್ನದ ಸರ ಆರ್ಡರ್ ಮಾಡಿದ್ದರು. ಡಿಸ್ ಪ್ಲೇ ನಲ್ಲಿ ಹಾಕಲಾಗಿದ್ದ ಚಿನ್ನದ ಸರ ಮಾಯವಾಗಿತ್ತು. ಅಂಗಡಿಯಲ್ಲಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಅನುಮಾನ ಮೇರೆಗೆ ಸಿಸಿಟಿವಿಯಲ್ಲಿ ಪರಿಶೀಲಿಸಿದಾಗ ಸೇಲ್ಸ್ ಮ್ಯಾನ್ ಚೇತನ್ ನಾಯ್ಡು ಸರ ಕಳ್ಳತನ ಮಾಡಿರುವುದು ಗೊತ್ತಾಗಿತ್ತು.
ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ತನಿಖೆ ನಡೆಸಿ ಆರೋಪಿ ಬಂಧಿಸಿ ವಿಚಾರಣೆ ನಡೆಸಿದಾಗ ಒಂದು ವರ್ಷದಿಂದ ಕಳ್ಳತನ ಮಾಡುತ್ತಿದ್ದು ಕದ್ದ ಮಾಲನ್ನ ಸ್ನೇಹಿತ ವಿಜಯ್ ಮುಖಾಂತರ ಮಾರಾಟ ಮಾಡುತ್ತಿದ್ದೆವು ಎಂದು ಒಪ್ಪಿಕೊಂಡಿದ್ದಾನೆ. ಸದ್ಯ ವಿಜಯ್ ನನ್ನ ಬಂಧಿಸಿ ಪೊಲೀಸ್ರು ಜೈಲಿಗಟ್ಟಿದ್ದಾರೆ.
PublicNext
18/07/2022 08:44 pm