ಬೆಂಗಳೂರು: ಸಿಟಿಯಲ್ಲಿ 4 ವರ್ಷಗಳಿಂದ ಕದ್ದುಮುಚ್ಚಿ ಸಾವಿರಾರು ಶ್ರೀಗಂಧದ ಮರಗಳನ್ನು ಕಡಿದು ಮಾರಾಟ ಮಾಡ್ತಿದ್ದ ಜಾಲವನ್ನ ಹೈಗ್ರೌಂಡ್ಸ್ ಪೊಲೀಸ್ರು ಭೇದಿಸಿದ್ದಾರೆ. ರಾಜ್ಯದಲ್ಲಿ ಗಂಧದ ಮರ ಕಡಿದು ಎಣ್ಣೆ ಕಾರ್ಖಾನೆಗೆ ಮಾರಾಟ ಮಾಡುತ್ತಿದ್ದ8 ಮಂದಿ ಈಗ ಸೆರೆ ಸಿಕ್ಕಿದ್ದಾರೆ.
ಆ. 1ರಂದು ಗಾಲ್ಫ್ ಕ್ಲಬ್ ಆವರಣದಲ್ಲಿ ಶ್ರೀಗಂಧ ಮರ ಕಳ್ಳತನ ಬಗ್ಗೆ ದೂರು ದಾಖಲಿಸಿದ ಇನ್‌ಸ್ಪೆಕ್ಟರ್ ಶಿವಸ್ವಾಮಿ ನೇತೃತ್ವದ ಪಿಎಸ್ಐ ಸಚಿನ್ ತಂಡ ಕಾರ್ಯಾಚರಣೆ ನಡೆಸಿ ತಮಿಳುನಾಡಿನ ಗೋವಿಂದ ಸ್ವಾಮಿ, ಮಾಧು, ವೆಂಕಟೇಶ್ , ಬೆಂಗಳೂರಿನ ರಾಮಚಂದ್ರ, ವಾಸೀಂ ಬೇಗ್, ವರದರಾಜ್ ಹಾಗೂ ಕದ್ದ ಮಾಲು ಖರೀದಿಸಿ ಗಂಧದ ಎಣ್ಣೆ ತಯಾರಿಸುತ್ತಿದ್ದ ಕಾರ್ಖಾನೆ ಉಸ್ತುವಾರಿ ನಂಜೇಗೌಡ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತರಿಂದ 3 ಕೋಟಿ ಮೌಲ್ಯದ 147 ಕೆಜಿ ಗಂಧದ ಎಣ್ಣೆ, 730 ಕೆಜಿ ಗಂಧದ ತುಂಡುಗಳನ್ನು ವಶ ಪಡಿಸಿ ವಿಚಾರಣೆಗೊಳಪಡಿಸಲಾಗಿದೆ.
ಕೆ.ಆರ್.ಪುರ, ಸದಾಶಿವನಗರ, ಬನ್ನೇರುಘಟ್ಟ, ಮಡಿವಾಳ ಹಾಗೂ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಗಳಲ್ಲಿ ಗಂಧದ ಮರ ಕಡಿಯುತ್ತಿದ್ದ ಆರೋಪಿಗಳು ಪೊಲೀಸರ ಕೈಗೆ ಸಿಗದಂತೆ ಎಚ್ಚರ ವಹಿಸಿದ್ದರು. ಆರೋಪಿ ರಾಮಚಂದ್ರ, ನಗರದಲ್ಲಿ ಎಲ್ಲೆಲ್ಲಿ ಶ್ರೀಗಂಧ ಮರಗಳಿವೆ ಎಂಬ ಬಗ್ಗೆ ತಮಿಳುನಾಡಿನ ಗ್ಯಾಂಗ್ ಗೆ ಮಾಹಿತಿ ನೀಡುತ್ತಿದ್ದ.
ನಂತರ ಕದ್ದ ಮರದ ತುಂಡುಗಳನ್ನು ಚಿಕ್ಕಬಳ್ಳಾಪುರದ ವಾಸೀಂ ಬೇಗ್ ತಂಡದ ಗ್ಯಾಂಗ್ ಪಡೆದ ಬಳಿಕ ಆಂಧ್ರದ ಪುಟ್ಟಪರ್ತಿ ಜಿಲ್ಲೆಯ ಮಡಕಶಿರಾ ಬಳಿಯ ರೊಳ್ಳಾ ಮಂಡಲ್ ಗಂಧದ ಎಣ್ಣೆ ಫ್ಯಾಕ್ಟರಿಗೆ ಮಾರುತ್ತಿದ್ದರು. ಪ್ರಕರಣದ ಒಟ್ಟು 16 ಆರೋಪಿಗಳ ಪೈಕಿ 8 ಮಂದಿಯನ್ನು ಬಂಧಿಸಲಾಗಿದೆ. ತಪ್ಪಿಸಿಕೊಂಡರಿಗೆ ಶೋಧ ನಡೆಯುತ್ತಿದೆ ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
PublicNext
02/09/2022 06:21 pm