ಬೆಂಗಳೂರು: ಬೆಂಗಳೂರು ನಗರ, ಗ್ರಾಮಾಂತರ ಸೇರಿ ರಾಜ್ಯದೆಲ್ಲೆಡೆ ಅನಧಿಕೃತವಾಗಿ ಸಾವಿರಾರು ಬಡಾವಣೆ ತಲೆಯೆತ್ತಿವೆ. ಇಂತಹ ಬಡಾವಣೆಗಳಿಗೆ ಕಡಿವಾಣ ಹಾಕಲು ಸರ್ಕಾರ ಹಲವು ಕಾನೂನು ಜಾರಿಗೆ ತರುತ್ತಿದ್ದು, ಅಧಿಕಾರಿಗಳು ಅನಧಿಕೃತ ಬಡಾವಣೆ ಹಾವಳಿಗೆ ಬ್ರೇಕ್ ಹಾಕಲು ಮುಂದಾಗ್ತಿದ್ದಾರೆ.
ಆದರೆ, ದೇವನಹಳ್ಳಿಯ ಕೆಲ ಅಧಿಕಾರಿಗಳು ತಾಲೂಕಿನ ಎಲ್ಲಾ ಕಡೆ ನಾಯಿ ಕೊಡೆಗಳಂತಿರುವ ಅನಧಿಕೃತ ಬಡಾವಣೆ ಗೋಜಿಗೆ ಹೋಗ್ತಿಲ್ಲ. ಯಾರದ್ದೋ ಒತ್ತಡಕ್ಕೆ ಮಣಿದು ದೇವನಹಳ್ಳಿಯ ಒಂದೇ ಬಡಾವಣೆನ ಟಾರ್ಗೆಟ್ ಮಾಡಿ ಪದೇ ಪದೆ ಜೆಸಿಬಿ ನುಗ್ಗಿಸ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ವಿಶಾಲ ಪ್ರದೇಶದಲ್ಲಿ ನಿರ್ಮಾಣ ಆಗಿರೋ ಬಡಾವಣೆನ ಧ್ವಂಸ ಮಾಡ್ತಿರೋ ಜೆಸಿಬಿಗಳು... ಈ ದೃಶ್ಯ ಕಂಡುಬಂದಿದ್ದು ದೇವನಹಳ್ಳಿ ತಾಲೂಕಿನ ಹಿತ್ತರಹಳ್ಳಿ ಬಳಿ. ಅಂದ ಹಾಗೆ ಹಿತ್ತರಹಳ್ಳಿ ಗ್ರಾಮ ಬೂದಿಗೆರೆ ಗ್ರಾಪಂಗೆ ಸೇರಿದೆ. ಈ ಪಂಚಾಯ್ತಿ ವ್ಯಾಪ್ತಿಯಲ್ಲಿ ಹತ್ತಾರು ಅನಧಿಕೃತ ಬಡಾವಣೆ ತಲೆಯೆತ್ತಿವೆ.
ಇಂದಿಗೂ ಅನಧಿಕೃತ ಬಡಾವಣೆ ನಿರ್ಮಾಣ ಆಗುತ್ತಲೇ ಇವೆ. ಕೇವಲ ನೆಪ ಮಾತ್ರಕ್ಕೆ ಆಗಾಗ್ಗೆ ಅಧಿಕಾರಿಗಳು ಇತ್ತ ಜೆಸಿಬಿ ತಂದು ಶೋ ಕೊಟ್ಟು ಹೋಗ್ತಿರ್ತಾರೆ. ಆದರೆ, ಹಿತ್ತರಹಳ್ಳಿ ಬಳಿಯ ಈ ಒಂದು ಬಡಾವಣೆಗೆ ಮಾತ್ರ ಸಮಯ ಸಿಕ್ಕಾಗಲೆಲ್ಲ ಜೆಸಿಬಿ ತಂದು ಕಾರ್ಯಾಚರಣೆಗಿಳಿದು ಬಿಡ್ತಾರೆ!
ಅದೇ ಗ್ರಾಮದ ಅನಿಲ್ ಎಂಬಾತನ ಕುಮ್ಮಕ್ಕಿನಿಂದ ಅಧಿಕಾರಿಗಳು ಈ ರೀತಿ ನಮಗೆ ಸದಾ ತೊಂದರೆ ಕೊಡ್ತಿದ್ದಾರೆ. ಅನಿಲ್ ನಮ್ಮ ಬಳಿ 48 ಲಕ್ಷ ರೂ. ಪಡೆದಿದ್ದ. ಹಣ ಕೇಳಿದ್ದಕ್ಕೆ ಕೊಡದೆ, ಈ ರೀತಿ ತೊಂದರೆ ಮಾಡಿಸುತ್ತಿದ್ದಾನೆ ಅಂತಾರೆ ದುಡ್ಡುಕೊಟ್ಟವ್ರು.
ಈ ಬಗ್ಗೆ ಅಧಿಕಾರಿಗಳನ್ನ ಪ್ರಶ್ನೆ ಮಾಡಿದ್ರೆ, ನಮಗೆ ಕೋರ್ಟ್ ಆದೇಶವಿದ್ದು, ಲೇಔಟ್ ತೆರವುಗೊಳಿಸಿದ್ದೇವೆ ಅಂತಿದ್ದಾರೆ. ಜೊತೆಗೆ ಇನ್ನುಳಿದ ಅನಧಿಕೃತ ಬಡಾವಣೆನ ಹಂತ ಹಂತವಾಗಿ ತೆರವು ಮಾಡ್ತೇವೆ ಎಂದು ಸಬೂಬು ಹೇಳ್ತಿದ್ದಾರೆ.
ಒಟ್ಟಾರೆ ಅನಧಿಕೃತ ಬಡಾವಣೆ ನಿರ್ಮಿಸಿ ಜಮೀನಿನ ಮಾಲೀಕರು ತಪ್ಪು ಮಾಡಿದ್ದಾರೆ. ಕೇವಲ ಒಂದೇ ಬಡಾವಣೆನ ಟಾರ್ಗೆಟ್ ಮಾಡ್ಕೊಂಡು ಅಧಿಕಾರಿಗಳು ಕರ್ತವ್ಯ ದ್ರೋಹ ಮಾಡಿದ್ದಾರೆ. ಇನ್ನಾದರೂ ಅಧಿಕಾರಿ ವರ್ಗ ಎಚ್ಚೆತ್ತು, ತಾಲೂಕಿನಲ್ಲಿನ ಎಲ್ಲಾ ಅನಧಿಕೃತ ಬಡಾವಣೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಿ.
- ಸುರೇಶ್ ಬಾಬು Public Next ದೇವನಹಳ್ಳಿ
PublicNext
06/05/2022 08:34 am