ಅಬ್ಬಬ್ಬ... ರೆಡ್ ಸ್ಯಾಂಡಲ್ ಈ ಹೆಸ್ರು ಕೇಳಿದ್ರೆ ಪುಷ್ಪ ಸಿನಿಮಾನೇ ಕಣ್ಮುಂದೆ ಬರುತ್ತೆ. ಅಷ್ಟಕ್ಕೂ ಈ ಸಿನಿಮಾ ಕಥಾ ಹಂದರವೇ ರೆಡ್ ಸ್ಯಾಂಡಲ್. ಅಂತಹದ್ದೇ ದೊಡ್ಡ ರೆಡ್ ಸ್ಯಾಂಡಲ್ ಬೇಸ್ ನ ಬ್ಯಾಟರಾಯನಪುರ ಇನ್ ಸ್ಪೆಕ್ಟರ್ ಶಂಕರ್ ನಾಯಕ್ ಆಂಡ್ ಟೀಂ ಪತ್ತೆ ಮಾಡಿದೆ.
ಆಂಧ್ರಪ್ರದೇಶದಿಂದ ನಗರಕ್ಕೆ ಅವ್ಯಾಹತವಾಗಿ ಕೊಟ್ಯಂತರ ಮೌಲ್ಯದ ಸಾವಿರಾರು ಕೆ.ಜಿ. ರಕ್ತಚಂದನ ತುಂಡುಗಳನ್ನು ಫಾರ್ಮ್ ಹೌಸ್ ನ ನೀರಿನ ಸಂಪ್ ನಲ್ಲಿ ಇಟ್ಟು ಹಂತ-ಹಂತವಾಗಿ ಮಾರಾಟ ಮಾಡುತ್ತಿದ್ದ ಆರೋಪದಡಿ ಓರ್ವ ಆರೋಪಿಯನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ವಿನೋದ್ ಬಂಧಿತ ಆರೋಪಿಯಾಗಿದ್ದು, ಈತ ಹೇಸರಘಟ್ಟದ ಫಾರ್ಮ್ ಹೌಸ್ ನಲ್ಲಿ 15 ದಿನಗಳಿಂದ ಕೆಲಸ ಮಾಡುತ್ತಿದ್ದ. ಜುಲೈ 22 ರಂದು ವಿನೋದ್ ಹಾಗೂ ಅಜಯ್ ಎಂಬವರು ಸ್ಯಾಟಲೈಟ್ ಬಸ್ ನಿಲ್ದಾಣದ ನ್ಯೂ ಟಿಂಬರ್ ಲೇಔಟ್ ನಲ್ಲಿ 113 ಕೆಜಿ ಮೌಲ್ಯದ ರೆಡ್ ಸ್ಯಾಂಡಲ್ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಇನ್ ಸ್ಪೆಕ್ಟರ್ ಶಂಕರ್ ನಾಯಕ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳ ಪೈಕಿ ವಿನೋದ್ ನನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಹೇಸರಘಟ್ಟದ ಫಾರ್ಮ್ ಹೌಸ್ ನಲ್ಲಿ ಖಾಲಿ ಸಂಪ್ ನಲ್ಲಿ ಪ್ಯಾಕ್ ಮಾಡಿ ಬಚ್ಚಿಟ್ಟಿದ್ದ ಒಟ್ಟು 2.68 ಕೋಟಿ ಮೌಲ್ಯದ 1693 ರಕ್ತಚಂದನ ಜಪ್ತಿ ಮಾಡಿದ್ದಾರೆ. ಇನ್ನೂ ನಾಲ್ವರು ತಲೆಮರೆಸಿಕೊಂಡಿದ್ದು, ವಿನೋದ್ ರಕ್ತ ಚಂದನ ತುಂಡುಗಳ ಮಾರಾಟಕ್ಕೆ ಮುಂದಾಗಿದ್ದ. ಈ ಫಾರ್ಮ್ ಹೌಸ್ ಮಾಲೀಕ ಯಾರೆಂಬ ಬಗ್ಗೆ ಮಾಹಿತಿಗಾಗಿ ವಿಲೇಜ್ ಅಕೌಂಟೆಂಟ್ ಗೆ ಪತ್ರ ಬರೆಯಲಾಗಿದೆ.
ಈ ರಕ್ತಚಂದನ ತುಂಡುಗಳನ್ನ ತರಕಾರಿ ಗಾಡಿ, ಹುಲ್ಲಿನ ವಾಹನಗಳಲ್ಲಿ ನಗರಕ್ಕೆ ಸಾಗಿಸಿರುವ ಶಂಕೆಯಿದ್ದು, ಈ ನಿಟ್ಟಿನಲ್ಲಿ ತನಿಖೆ ಸಾಗಿದೆ. ಕಮಿಷನರ್ ಬ್ಯಾಟರಾಯನಪುರ ಪೊಲೀಸ್ರಿಗೆ 25 ಸಾವಿರ ರಿವಾರ್ಡ್ ಘೋಷಿಸಿದ್ದಾರೆ.
- ಶ್ರೀನಿವಾಸ್ ಚಂದ್ರ, ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
26/07/2022 07:23 pm