ಬೆಂಗಳೂರು: ಸ್ಯಾಟ್ ಲೈಟ್ ಬಸ್ ನಿಲ್ದಾಣದಿಂದ ವೇಲೂರು ಕಡೆಗೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್‌ನಲ್ಲಿ ಅನುಮಾನಾಸ್ಪದ ಪ್ರಯಾಣಿಕನೊಬ್ಬ ಬ್ಯಾಗ್ ಬಿಟ್ಟು ಪರಾರಿಯಾದ ಘಟನೆ ನಡೆದಿದೆ. ಮಧ್ಯಾಹ್ನ 2:30ರ ಹೊತ್ತಿಗೆ ಹೊರಟ ಬಸ್, ಲಾಲ್‌ಬಾಗ್ ಬಸ್ ನಿಲ್ದಾಣದಲ್ಲಿ ಬ್ಯಾಗ್ ಸಹಿತ ಓರ್ವ ಪ್ರಯಾಣಿಕ ಹತ್ತಿ, ಬೆಂಗಳೂರಿನಿಂದ ಆಂಬೂರಿಗೆ ಟಿಕೆಟ್ ಕೂಡ ಪಡೆದಿದ್ದ. ಬಸ್‌ನ ಕೊನೆ ಸೀಟಿನಲ್ಲಿ ಕುಳಿತುಕೊಂಡಿದ್ದ ಪ್ರಯಾಣಿಕನ ನಡೆ ಅನುಮಾನಾಸ್ಪದವಾಗಿತ್ತು. ಇದನ್ನು ಗಮಿಸಿದ ಚಾಲಕ ರವಿಕುಮಾರ್.ಆರ್ ಮತ್ತು ಕಂಡಕ್ಟರ್ ಮಂಜುನಾಥ ಬಿ.ಸಿ ಕಾನೂನುಬಾಹಿರ ವಸ್ತುಗಳನ್ನು ಬಸ್‌ನಲ್ಲಿ ಸಾಗಿಸಲು ನಿರ್ಬಂಧವಿರುವ ಕಾರಣಕ್ಕೆ ಬ್ಯಾಗ್ ತಪಾಸಣೆಗೆ ಮುಂದಾಗಿದ್ದಾರೆ.
ಆದರೆ ಆ ಪ್ರಯಾಣಿಕ ಬ್ಯಾಗ್ ತಪಾಸಣೆಗೆ ವಿರೋಧ ವ್ಯಕ್ತಪಡಿಸಿದ್ದಾನೆ. ಮಡಿವಾಳ ಬಳಿ ಬಸ್‌ಗೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಂತಾಗ ಆ ಪ್ರಯಾಣಿಕ ಬಸ್‌ನಿಂದ ಇಳಿದು ಓಡಿ ಹೋಗಿದ್ದಾನೆ. ಇತ್ತ ಕಂಡಕ್ಟರ್ ಮಂಜುನಾಥ್, ಪ್ರಯಾಣಿಕನನ್ನು ಹಿಡಿಯಲು ಪ್ರಯತ್ನಿಸಿದರೂ ಸಹ ತಪ್ಪಿಸಿಕೊಂಡು ಹೋಗಿದ್ದಾನೆ. ನಂತರ ಪ್ರಯಾಣಿಕ ತಂದಿದ್ದ ಬ್ಯಾಗ್ ಅನ್ನು ಪರಿಶೀಲಿಸಿದಾಗ, ವಿವಿಧ ಕಂಪನಿಯ 7 ಲ್ಯಾಪ್‌ಟಾಪ್ ಮತ್ತು 7 ಮೊಬೈಲ್‌ಗಳು ಇರುವುದು ಕಂಡು ಬಂದಿದೆ.
ಕೂಡಲೇ, ಬಸವನಗುಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಕಾನೂನು ಕ್ರಮಕ್ಕಾಗಿ ಎಲ್ಲ ವಸ್ತುಗಳನ್ನು ಹಸ್ತಾಂತರ ಮಾಡಲಾಗಿದೆ. ಇತ್ತ ನಿಗಮದ ಸಿಬ್ಬಂದಿ ಕರ್ತವ್ಯ ನಿಷ್ಠೆ ಮತ್ತು ದಕ್ಷತೆಯನ್ನು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಶ್ಲಾಘಿಸಿ ಅಭಿನಂದನಾ ಪತ್ರವನ್ನು ನೀಡಿದ್ದಾರೆ.
Kshetra Samachara
05/05/2022 09:24 am