ಬೆಂಗಳೂರು: ಅಪ್ಪ ಎಂದರೆ ಬೆಳಕು. ಅಪ್ಪನಿಂದಲೇ ಬದುಕು. ಮಕ್ಕಳ ಪಾಲಿಗೆ ಅಪ್ಪನೇ ಮೊದಲ ಹೀರೋ ಆದ್ರೆ ಇಲ್ಲೊಬ್ಬ ಮಗನ ಬಾಳಲ್ಲಿ ಅಪ್ಪನೇ ವಿಲನ್ ಆಗಿದ್ದಾನೆ. ನಡು ರಸ್ತೆಯಲ್ಲಿ ಥಿನ್ನರ್ ಸುರಿದು ಬೆಂಕಿ ಹಚ್ಚಿ ಕ್ರೌರ್ಯತೆ ಮರೆದಿದ್ದಾನೆ.
ಆದ್ರೆ ಮಗ ಮಾತ್ರ ಸಾಯುವ ಕೊನೆಯ ಕ್ಷಣದಲ್ಲಿಯೂ ಅಪ್ಪನನ್ನು ಬಿಟ್ಟುಕೊಟ್ಟಿಲ್ಲ, ನನಗೆ ನಾನೇ ಬೆಂಕಿ ಹಚ್ಚಿಕೊಂಡಿದ್ದೇನೆ. ನನ್ನ ತಂದೆ ಹಚ್ಚಿಲ್ಲ ಎನ್ನುವ ಹೇಳಿಕೆ ಕೊಟ್ಟಿದ್ದಾನೆ.
ಹೌದು ಕಳೆದ ವಾರಷ್ಟೇ ಬೆಂಗಳೂರಿನ ಆಜಾದ್ ನಗರದಲ್ಲಿ ಪಾಪಿ ತಂದೆ ಸುರೇಂದ್ರ ಮಗ ಅರ್ಪಿತ್ ಮೇಲೆ ಥಿನ್ನರ್ ಸುರಿದು ಬೆಂಕಿ ಹಚ್ಚಿದ ಅಮಾನವೀಯ ಘಟನೆ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು.
ಅಪ್ಪನೇ ಮಗನಿಗೆ ಬೆಂಕಿ ಹಚ್ಚುವ ವಿಡಿಯೋ ಕಂಡ ಎಲ್ಲರೂ ಪಾಪಿ ತಂದೆಯನ್ನು ಶಪಿಸಿದ್ದರು. ಆದರೆ ಆಸ್ಪತ್ರೆ ಪಾಲಾದ ಮಗ ಸಾಯುವ ಮುನ್ನ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ನಾನೇ ಬೆಂಕಿ ಹಚ್ಚಿಕೊಂಡಿದ್ದೇನೆ ಎಂದಿದ್ದಾರೆ. ಯಾವಾಗ ಪೊಲೀಸರು ಸ್ಥಳ ಪರಿಶೀಲನೆಗೆ ಸ್ಥಳಕ್ಕೆ ಹೋದಾಗ ಸಿಸಿಟಿವಿ ವಿಡಿಯೋ ನಿಜಾಂಶವನ್ನು ಹೊರಹಾಕಿದೆ.
ಸದ್ಯ ಪಾಪಿ ತಂದೆ ಸುರೇಂದ್ರ ಪೊಲೀಸರ ಅತಿಥಿಯಾಗಿದ್ದಾನೆ. ಮಾಡಿದ ತಪ್ಪನ್ನು ಒಪ್ಪಿಕೊಂಡು ಕಣ್ಣೀರಿಟ್ಟಿದ್ದಾನೆ.
ಈಗ ಕಣ್ಣೀರಿಟ್ಟರೆ ಏನು ಪ್ರಯೋಜನ ಕೋಪದಲ್ಲಿ ಕೋಯ್ದುಕೊಂಡ ಮೂಗು ಮರಳಿ ಬರುವುದಿಲ್ಲ. ಆತುರದ ನಿರ್ಧಾರಗಳು ತರವಲ್ಲ ಎನ್ನುವುದು ಈ ಪ್ರಕರಣದಲ್ಲಿ ಮತ್ತೊಮ್ಮೆ ಸಾಭೀತಾಗಿದೆ.
ಒಟ್ಟಿನಲ್ಲಿ ಅಪ್ಪನೇ ಕೊಂದರು ಅಪ್ಪನನ್ನು ಬಿಟ್ಟುಕೊಡದ ಮಗ ಅರ್ಪಿತ್ ಹೃದಯ ವೈಶ್ಯಾಲ್ಯತೆ ಕಂಡ ಅನೇಕ ಮನಸ್ಸುಗಳು ಭಾವುಕಗೊಂಡಿವೆ.
PublicNext
08/04/2022 06:44 pm