ಅರಣ್ಯ ಇಲಾಖೆಯ ಇಲಾಖೆಯ ಅನುಮತಿ ಇಲ್ಲದೇ ಸರ್ಕಾರಿ ಗುಂಡುತೋಪಿನಲ್ಲಿದ್ದ ನೀಲಿಗಿರಿ ಮರಗಳನ್ನ ಅಕ್ರಮವಾಗಿ ಕಡಿದು ಮಾರಾಟ ಮಾಡಲಾಗಿದೆ, ಪಂಚಾಯತ್ ಸದಸ್ಯರೇ ಮರಗಳನ್ನ ಅಕ್ರಮವಾಗಿ ಕಡಿದು ಮಾರಾಟ ಮಾಡಿರುವುದರ ವಿರುದ್ಧ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಗುಳ್ಯನಂದಿಗುಂದ ಗ್ರಾಮದ ಸರ್ವೆ ನಂಬರ್ 7/1ರಲ್ಲಿ 1 ಎಕರೆ 14 ಗುಂಟೆ ಸರ್ಕಾರಿ ಗುಂಡುತೋಪು ಇದ್ದು, ಇದೇ ಜಾಗದಲ್ಲಿ ಗ್ರಾಮಸ್ಥರು ಜಾನುವಾರುಗಳನ್ನ ಮೇಯಿಸುತ್ತಿದ್ದರು. ಪಂಚಾಯತ್ ವತಿಯಿಂದ ನೀಲಿಗಿರಿ ಮರಗಳನ್ನು ಹಾಕಲಾಗಿತ್ತು, ಮುಗಿಲೆತ್ತರಕ್ಕೆ ಬೆಳೆದಿದ್ದ ನೀಲಿಗಿರಿ ಮರಗಳ ನೆರಳಿನಲ್ಲಿ ಗೋಪಾಲಕರು ವಿಶ್ರಾಂತಿ ಪಡೆಯುತ್ತಿದ್ದರು. ಅರಣ್ಯ ಇಲಾಖೆಗೆ ಸೇರಿದ್ದ ಮರಗಳನ್ನ ರಾಜಾರೋಷವಾಗಿ ಕಡಿದು ಮಾರಾಟ ಮಾಡಲಾಗಿದೆ. ಮರಗಳ ಮಾರಣಹೋಮ ನಡೆದಿದ್ದು ಇಡೀ ಜಾಗ ಸ್ಮಶಾನದಂತೆ ಭಾಸವಾಗುತ್ತಿದೆ.
ಹೆಗ್ಗಡಿಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಈ ಪ್ರದೇಶ ಒಳಪಡಲಿದೆ. ಪಂಚಾಯತ್ ಸದಸ್ಯರಾದ ಚಿಕ್ಕಪ್ಪಯ್ಯ, ನಾರಾಯಣಸ್ವಾಮಿ ಮತ್ತು ಗೂಳ್ಯ ಗ್ರಾಮಸ್ಥರಾದ ಮಂಜುನಾಥ್, ಶಿವಣ್ಣ ನಾಲ್ವರು ಸೇರಿ ಅಕ್ರಮವಾಗಿ ಮರಗಳನ್ನ ಕಡಿದು ಮಾರಾಟ ಮಾಡಿದ್ದಾರೆಂಬ ಆರೋಪ ಇದೆ. ಅರಣ್ಯ ಇಲಾಖೆ ಮತ್ತು ಪಂಚಾಯತಿಯ ಅನುಮತಿ ಇಲ್ಲದೇ ಲಕ್ಷಾಂತರ ರೂಪಾಯಿ ಮೌಲ್ಯದ ಮರಗಳನ್ನ ಕಡಿದು ಮಾರಾಟ ಮಾಡಿರುವುದರ ವಿರುದ್ಧ ದೊಡ್ಡಬಳ್ಳಾಪುರ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ಸಹ ದಾಖಲಾಗಿದೆ.
ಜಾನುವಾರುಗಳಿಗೆ ಉಳುವಿಗಾಗಿ ಗ್ರಾಮದಲ್ಲಿ ಗುಂಡುತೋಪುಗಳು ಇರಬೇಕಿದೆ, ಗುಂಡುತೋಪಿನಲ್ಲಿ ದಟ್ಟವಾದ ಗಿಡಮರಗಳು ಇದ್ದರೆ ಮಾತ್ರ ಜಾನುವಾರುಗಳ ಉಳಿವು, ಆದರೆ ಇದೇ ಮರಗಳನ್ನ ಸ್ವಾರ್ಥಕ್ಕಾಗಿ ಕಡಿದು ಮಾರಟ ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು ಮರಗಳ್ಳರಿಗೆ ಎಚ್ಚರಿಕೆ ಸಂದೇಶ ರವಾನಿಸಬೇಕಿದೆ.
PublicNext
26/07/2022 03:18 pm