ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ವಿಶೇಷ ರೀತಿಯಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣೆ ಮಾಡಲಾಗುತ್ತಿದೆ. ಆಗಸ್ಟ್ 15 ರಂದು 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಹೊಸ ಮಾದರಿಯ 75 ಎಲೆಕ್ಟ್ರಿಕ್ ಬಸ್ಸುಗಳನ್ನು ರಸ್ತೆಗಿಳಿಸಲು ಬಿಎಂಟಿಸಿ ಸಿದ್ಧತೆ ಮಾಡಿಕೊಂಡಿದೆ.
ಸ್ವಿಚ್ ಮೊಬಿಲಿಟಿ ಲಿಮಿಟೆಡ್ ನಿಂದ 12 ಮೀಟರ್ ಉದ್ದದ ನಾನ್ ಎಸಿ ಎಲೆಕ್ಟ್ರಿಕ್ ಬಸ್ಸುಗಳು ಇವೆ. ಆಗಸ್ಟ್ 14 ರಂದು ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈ ಬಸ್ಸುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ.
ಬಿಎಂಟಿಸಿಯೂ ಕೇಂದ್ರ ಸರ್ಕಾರದ ಫೇಮ್ -2 ಯೋಜನೆಯಡಿ 300 ಎಲೆಕ್ಟ್ರಿಕ್ ಬಸ್ ಗಳ ಖರೀದಿಗೆ ಟೆಂಡರ್ ಆಹ್ವಾನಿಸಿತ್ತು. ಕಿಲೋ ಮೀಟರ್ ಗೆ 48.95 ಯಂತೆ ಸ್ವಿಚ್ ಕಂಪನಿ ಟೆಂಡರ್ ಪಡೆದು ಗುತ್ತಿಗೆ ಆಧಾರದ ಮೇಲೆ 300 ಬಸ್ಸುಗಳನ್ನ ಬಿಎಂಟಿಸಿಗೆ ಒದಗಿಸಲಿದೆ.
ಈ ಬಸ್ಸುಗಳಿಗೆ ಟೆಂಡರ್ ಪಡೆದ ಕಂಪನಿಯೇ ಚಾಲಕರನ್ನ ಒದಗಿಸಲಿದೆ. ನಿರ್ವಹಣೆ ಮತ್ತು ಚಾರ್ಜ್ ಮಾಡಲು ಬೇಕಾದ ಮೂಲ ಸೌಕರ್ಯವನ್ನು ಇದೇ ಸಂಸ್ಥೆ ಮಾಡಲಿದೆ. ಈ ಹೊಸ ಬಸ್ಸುಗಳು 41 ಆಸನ ಹೊಂದಿರಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿಲೋಮೀಟರ್ ಸಂಚಾರ ಮಾಡಬಹುದು. ಮತ್ತೆ ಚಾರ್ಜ್ ಮಾಡಿದರೆ 75 ಕಿಲೋ ಮೀಟರ್ ಸೇರಿದಂತೆ ಒಟ್ಟು 225 ಕಿ.ಮೀ ಪ್ರಯಾಣ ಮಾಡಬಹುದಾಗಿದೆ.
ಸಾಮಾನ್ಯ ಬಿಎಂಟಿಸಿ ಬಸ್ಸುಗಳಲ್ಲಿನ ದರವೇ ಈ ಬಸ್ಸುಗಳಲ್ಲಿ ಇರಲಿವೆ. ಪಾಸ್ ಗಳಿಗೂ ಅನುಮತಿ ಇರಲಿದೆ. ಬಸ್ ಗಳ ಕಲರ್ ಕೂಡ ಪ್ರಯಾಣಿಕರನ್ನ ಆಕರ್ಷಣೆಗೊಳಿಸಲಿದೆ.
ವರದಿ - ಗಣೇಶ್ ಹೆಗಡೆ
PublicNext
11/08/2022 04:28 pm