ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಿಡ್ ನೈಟ್ ಡಿನ್ನರ್ ಮೀಟಿಂಗ್ ನಿಂದ ಕರ್ನಾಟಕ ಬಡವಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಕಾನೂನು ಪ್ರಕೋಷ್ಠದ ವಿಶೇಷ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಹೊರಗಡೆಯಿಂದ ಬಂದವರು ಎಂದು ಆಡಳಿತ ಪಕ್ಷದಲ್ಲಿ ಕೆಲವರಿಗೆ ಅನಿಸಿದೆ. ಒಂದು ಬಾರಿ 5 ವರ್ಷ ಕಾಲ ಮುಖ್ಯಮಂತ್ರಿಯಾಗಿದ್ದಾರೆ. ಎರಡನೇ ಬಾರಿಗೆ 2 ವರ್ಷ ಸಿಎಂ ಆಗಿದ್ದು, ಅವರೇ ಅಧಿಕಾರ ಬಿಟ್ಟುಕೊಡಬೇಕೆಂಬ ಚರ್ಚೆ ಈಗ ಕಾಂಗ್ರೆಸ್ಸಿನಲ್ಲಿ ಆರಂಭವಾಗಿದೆ ಎಂದರು.
ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ನಡುವೆ ಅವರ ಹೈಕಮಾಂಡಿನ ಮಟ್ಟದಲ್ಲಿ ಅಧಿಕಾರದ ಒಪ್ಪಂದ, ಸೂತ್ರ ಏರ್ಪಟ್ಟಿದೆ. ಆದ್ರೆ ಅಭಿವೃದ್ಧಿ ಬಗ್ಗೆ ಒಪ್ಪಂದ ಆಗಿಲ್ಲ, ಅಧಿಕಾರ ಹಂಚಿಕೆ ಕುರಿತು ಒಪ್ಪಂದವಾದಂತಿದೆ ಎಂದು ವ್ಯಂಗ್ಯವಾಡಿದರು. ಹಿಂದೆ ಟೆಸ್ಟ್ ಮ್ಯಾಚ್ ನೋಡುತ್ತಿದ್ದೀರಿ, ಬಳಿಕ ಏಕದಿನ ಪಂದ್ಯ ನಡೆಯುತ್ತಿತ್ತು. ಬಳಿಕ 20-20 ಮ್ಯಾಚ್‍ಗಳು ಆರಂಭವಾಗಿದೆ, ಹಾಗೇ ಇವರ ಒಪ್ಪಂದ ನಡೆದಿದೆ ಎಂದು ಚಾಟಿ ಬೀಸಿದರು.
ರಾಜ್ಯದ ಜನರು ಆಶೀರ್ವಾದ ಮಾಡಿ, ಸ್ಪಷ್ಟ ಬಹುಮತ ಕೊಟ್ಟರೂ ಸಹ ಇವರಿಗೆ ಅಧಿಕಾರ ಹಂಚುವಿಕೆ ಬಗ್ಗೆ ಚರ್ಚೆಯೇ ಮುಖ್ಯವಾಗಿದೆಯೇ ಹೊರತು, ಅಭಿವೃದ್ಧಿಯ ವಿಚಾರ ಪ್ರಮುಖವಾಗಿಲ್ಲ ಎಂದು ಕಿಡಿ ಕಾರಿದರು. ಒಂದು ಕಡೆ ಸಿದ್ದರಾಮಯ್ಯನವರು ಅವರ ಅವಧಿ ಪೂರ್ಣವಾದರೂ ಬಿಟ್ಟು ಕೊಡಲು ಮನಸ್ಸು ಬರುತ್ತಿಲ್ಲ. ಸಚಿವರ ನೇತೃತ್ವದಲ್ಲಿ ಡಿ.ಕೆ. ಶಿವಕುಮಾರ್ ಇಲ್ಲದ ವೇಳೆ ಡಿನ್ನರ್ ಮೀಟಿಂಗ್ ಮಾಡ್ತಿದ್ದಾರೆ ಎಂದು ಆರೋಪಿಸಿದರು. ಇನ್ನೊಂದೆಡೆ ವಿಳಂಬವಾಗಿ ಮಲಗುವ ಡಿ.ಕೆ.ಶಿವಕುಮಾರ್ ಲೇಟ್ ನೈಟ್ ಮೀಟಿಂಗ್ ಶುರು ಮಾಡಿದ್ದಾರೆ. ಇದು ಸದ್ಯದ ರಾಜಕೀಯ ಪರಿಸ್ಥಿತಿ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
PublicNext
11/01/2025 11:08 pm