ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೆರೆ ನುಂಗೋದ್ರಲ್ಲಿ, ಮರಗಿಡಗಳನ್ನ ಕಡಿದು ರಸ್ತೆ ಅಗಲೀಕರಣ ಮಾಡೋದ್ರಲ್ಲಿ ನಮ್ಮ ಕರ್ನಾಟಕ ಸರ್ಕಾರ ಎತ್ತಿದ ಕೈ! ಆದ್ರೆ, ಎಷ್ಟೇ ಚೆನ್ನಾಗಿ ರಸ್ತೆ ಮಾಡಿದ್ರೂ ಸಣ್ಣ ಪ್ರಮಾಣದ ಮಳೆ ಬಂದ್ರೆ ರಸ್ತೆಗಳೆಲ್ಲ ಕೆರೆಗಳಾಗಿ ಮಾರ್ಪಾಟಾಗುತ್ತವೆ. ಯಾಕಂದ್ರೆ ನಿಜಕ್ಕೂ ಅಲ್ಲಿ ಮೋರಿ ಸಮಸ್ಯೆ ಅಥವಾ ಕೆರೆಯ ಜಾಗ ಹಾಗೆ ಇರುತ್ತೆ.
ಹೌದು... ಇದು ಕೆಂಗೇರಿ ಸಮೀಪದಲ್ಲಿರುವ ಮೈಲಸಂದ್ರ ಕೆರೆ. ಇದರ ಒಟ್ಟು ವಿಸ್ತೀರ್ಣ 6 ಎಕರೆ 24 ಗುಂಟೆ. ಆದ್ರೆ, ಅಧಿಕಾರಿಗಳು ರಸ್ತೆಗಾಗಿ ಬರೋಬ್ಬರಿ ಎರಡು ಎಕರೆ ಕೆರೆಯ ಜಾಗವನ್ನು ಒತ್ತುವರಿ ಮಾಡಿದ್ದಾರೆ.
ಈ ದೃಶ್ಯಗಳಲ್ಲಿ ಕಾಣ್ತಿರುವ ಕಾಮಗಾರಿಯ ಜಾಗವೆಲ್ಲವೂ ಮೊದಲು ಕೆರೆ ಇದ್ದಂತಹ ಜಾಗ. ಇಲ್ಲಿ ಉತ್ತರಳ್ಳಿ, ಬನಶಂಕರಿ, ಡಾ. ವಿಷ್ಣುವರ್ಧನ್ ರಸ್ತೆ ಹಾಗೂ ಕೆಂಗೇರಿಯಿಂದ ಬಸ್ ಗಳು ಮತ್ತಿತರ ವಾಹನಗಳು ಸಂಚರಿಸುತ್ತವೆ. ವಾಹನಗಳ ದಟ್ಟಣೆ ಜಾಸ್ತಿ ಇದೆ.
ರಸ್ತೆ ಅಗಲೀಕರಣ ಮಾಡಬೇಕೆಂದರೆ ಖಾಸಗಿ ಭೂಮಿಯನ್ನ ಖರೀದಿಸಿ ಮಾಡಬಹುದಿತ್ತು. ಆದ್ರೆ, ಕೆರೆಯ ಜಾಗವನ್ನ ಮುಚ್ಚಿ ರಸ್ತೆ ಮಾಡ್ತಿರೋದು ಎಷ್ಟರ ಮಟ್ಟಕ್ಕೆ ಸರಿ? ಹಾಗಾದ್ರೆ ಸರ್ಕಾರಕ್ಕೆ ಒಂದು ನ್ಯಾಯ, ಜನರಿಗೆ ಇನ್ನೊಂದು ನ್ಯಾಯವೇ?
ಬೇಲಿಯೆ ಎದ್ದು ಹೊಲ ಮೇಯಿತು ಅನ್ನೋ ಹಾಗೆ, ಸರ್ಕಾರ ಮತ್ತು ಅಧಿಕಾರಿಗಳೇ ಈ ತರಹ ಮಣ್ಣು ತಿನ್ನುವ ಕೆಲಸ ಮಾಡಿದ್ರೆ ಏನು ಕಥೆ! ಒಂದು ರಸ್ತೆಯನ್ನ ಹೇಗೆ ಬೇಕಾದ್ರೂ ಅಗಲೀಕರಣ ಮಾಡಬಹುದು ಅಥವಾ ಆ ರಸ್ತೆ ಮುಚ್ಚಿ ಬೇರೆ ಕಡೆ ಸಂಪರ್ಕ ಕಲ್ಪಿಸಬಹುದು.
ಆದ್ರೆ, ಒಂದು ಕೆರೆ ಸೃಷ್ಟಿಸೋದು ಬಹಳ ಕಷ್ಟ. ಇದೆಲ್ಲವೂ ಮುಂದೆ ಒಂದು ದಿನ ಪ್ರಕೃತಿಯ ವಿಕೋಪಕ್ಕೆ ಬಲಿಯಾಗುವುದಂತೂ ಗ್ಯಾರಂಟಿ. ಅಧಿಕಾರಿಗಳೇ, ಎಚ್ಚೆತ್ತುಕೊಳ್ಳಿ. ನೀವು ಮಾಡ್ತಿರುವ ಅನಾಗರಿಕ ಕೆಲಸವನ್ನು ತಕ್ಷಣ ನಿಲ್ಲಿಸಿ.
- ರಂಜಿತಾ ಸುನಿಲ್, ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
04/10/2022 04:38 pm