ಬೆಂಗಳೂರು: ಕೋಟ್ಯಂತರ ರೂಪಾಯಿ ಲೋನ್ ನೀಡಿ ಅಸಲು ಹಾಗೂ ಬಡ್ಡಿ ಕಟ್ಟಿಸಿಕೊಳ್ಳದೆ ನಗರದ ಶುಶೃತಿ ಸೌಹಾರ್ದ ಕೋ ಅಪರೇಟಿವ್ ಬ್ಯಾಂಕ್ ದಿವಾಳಿಗೆ ನೂಕಿದ್ದ ಬ್ಯಾಂಕ್ ಅಧಿಕಾರಿ-ಸಿಬ್ಬಂದಿ ಹಾಗೂ ಗ್ರಾಹಕರ ಸೇರಿದಂತೆ ಒಟ್ಟು 14 ಕಡೆಗಳಲ್ಲಿ ಏಕಕಾಲದಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಬ್ಯಾಂಕ್ ನಿರ್ದೇಶಕ, ಸಿಬ್ಬಂದಿ ಹಾಗೂ ವಾಮಮಾರ್ಗದಲ್ಲಿ ಸಾಲ ಪಡೆದಿದ್ದ ಗ್ರಾಹಕರ ಮನೆ ಹಾಗೂ ಕಚೇರಿಗಳ ಮೇಲೆ ಸಿಸಿಬಿ ದಾಳಿ ನಡೆಸಿದ್ದು, ರಾಜಗೋಪಾಲನಗರದಲ್ಲಿರುವ ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸ್ ಮನೆ ಹಾಗೂ ವಿಲ್ಸನ್ ಗಾರ್ಡನ್, ಪೀಣ್ಯ ಮತ್ತು ಚಿಕ್ಕಜಾಲ ಸೇರಿ 14 ಕಡೆಗಳಲ್ಲಿ ಸಿಸಿಬಿ ಐವರು ಎಸಿಪಿಗಳು ಹಾಗೂ 14 ಇನ್ ಸ್ಪೆಕ್ಟರ್ ನೇತೃತ್ವದ ತಂಡ ಬೆಳ್ಳಂಬೆಳ್ಳಗೆ ದಾಳಿ ನಡೆಸಿದೆ.
1998ರಲ್ಲಿ ಸ್ಥಾಪನೆಯಾಗಿದ್ದ ಬ್ಯಾಂಕ್ ಸಾವಿರಾರು ಸಂಖ್ಯೆಯಲ್ಲಿ ಗ್ರಾಹಕರು ಠೇವಣಿದಾರರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಬ್ಯಾಂಕ್ ಆಡಳಿತ ಮಂಡಳಿಯು ಲೋನ್ ಕೊಡುವ ವಿಚಾರದಲ್ಲಿ ಬ್ಯಾಂಕ್ ನಿಯಮವನ್ನ ಗಾಳಿಗೆ ತೂರಿತ್ತು. ಸಿಬ್ಬಂದಿ ಮೂಲಕ ಬೇಕಾದವರಿಗೆ ಯಾವುದೇ ಶ್ಯೂರಿಟಿವಿಲ್ಲದೆ ಲಕ್ಷಾಂತರ ರೂಪಾಯಿ ಆಡಳಿತ ಮಂಡಳಿ ಸಾಲ ನೀಡುತಿತ್ತು. ಸಾಲ ಪಡೆದುಕೊಂಡ ಗ್ರಾಹಕರು ಮತ್ತೆ ಲೋನ್ ಕಟ್ಟುತ್ತಿರಲಿಲ್ಲ. ಕೊರೊನಾ ಮುನ್ನ ಬ್ಯಾಂಕ್ ನಲ್ಲಿ ಸುಮಾರು 100 ಕೋಟಿಗೂ ಅಧಿಕ ಹಣ ಠೇವಣಿ ರೂಪದಲ್ಲಿತ್ತು. ಕಳೆದ ಮೂರು ವರ್ಷಗಳಿಂದ ಠೇವಣಿ ಹಣ ಗಣನೀಯವಾಗಿ ತಗ್ಗಿ ಬ್ಯಾಂಕ್ ದಿವಾಳಿಯಾಗಲು ಕಾರಣವಾಗಿತ್ತು. ಬ್ಯಾಂಕ್ ನಲ್ಲಿ ಹಣ ಹೂಡಿಕೆ ಮಾಡಿದ್ದ ಗ್ರಾಹಕರಿಗೆ ಹಣ ನೀಡದೆ ವಂಚನೆ ಹಿನ್ನೆಲೆಯಲ್ಲಿ ನಗರದ ನಾನಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು. ಈ ಎಲ್ಲಾ ಪ್ರಕರಣ ಸಿಸಿಬಿ ವರ್ಗ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡು ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸ್ ಸೇರಿ ಐವರನ್ನು ಬಂಧಿಸಿದ್ರು. ಸದ್ಯ ದಾಳಿ ವೇಳೆ 20 ಲಕ್ಷಕ್ಕೂ ಅಧಿಕ ನಗದು ಮತ್ತು ಕೋಟ್ಯಾಂತರ ರೂಪಾಯಿ ಆಸ್ತಿ ಪತ್ರಗಳು ಪತ್ತೆಯಾಗಿವೆ.
PublicNext
12/10/2022 02:10 pm