ಮಕ್ಕಳ ಕಳ್ಳರು ಎನ್ನುವ ವದಂತಿಗೆ ತಲೆಕೊಡಬೇಡಿ ಅಂತ ಪೊಲೀಸರು ಸಾಕಷ್ಟು ಜಾಗೃತಿ ಮೂಡಿಸಿದ್ರೂ ಜನ ಬುದ್ಧಿ ಕಲಿಯಲಿಲ್ಲ. ಅದೇ ವದಂತಿಗೆ ಒಬ್ಬ ಪ್ರಾಣವೇ ಹಾರಿ ಹೋಗಿದೆ. ಇನ್ನೊಂದು ಕಡೆ ಈ ಸಾವಿಗೆ ಲಾಕಪ್ ಡೆತ್ ತಿರುವು ಪಡೆದುಕೊಂಡಿತ್ತು. ಸದ್ಯ ಸಿಸಿಟಿವಿಯ ವಿಡಿಯೋ ಅಸಲಿ ಸತ್ಯವನ್ನ ಬಿಚ್ಚಿಟ್ಟಿದೆ.
ರಾಮಮೂರ್ತಿ ನಗರದಲ್ಲಿ ಭಾಷೆ ಬಾರದಿದ್ದವನ ಹಿಡಿದು ಮಕ್ಕಳ ಕಳ್ಳ... ಮಕ್ಕಳ ಕಳ್ಳ... ಎಂದು ಕಟ್ಟಿ ಹೊಡೆದ ಗುಂಪು, ಬಳಿಕ ಪೊಲೀಸರಿಗೆ ಒಪ್ಪಿಸಿದ ಮೇಲೆ ಆತ ಕೆ.ಆರ್ ಪುರ ಬಳಿ ಶವವಾಗಿ ಪತ್ತೆಯಾಗಿದ್ದ. ಈ ಸಾವಿನ ಸುತ್ತ ಲಾಕಪ್ ಡೆತ್ ಎಂಬ ಹುತ್ತ ಬೆಳೆಯುವ ಮುನ್ನವೆ ಠಾಣೆಯ ಸಿಸಿಟಿವಿ ಇದಕ್ಕೆ ಮುಕ್ತಿ ನೀಡಿದೆ.
ಜಾರ್ಖಂಡ್ ಮೂಲದ ಸಂಜಯ್‌ನನ್ನು ಕರೆದುಕೊಂಡು ಹೋಗಿದ್ದ ರಾಮಮೂರ್ತಿ ನಗರ ಪೊಲೀಸರು ವಿಚಾರಣೆ ಮಾಡಿದಾಗ ಆತ ಮೂಲತಃ ಜಾರ್ಖಂಡ್‌ನವನು, ಇಲ್ಲಿ ಸೆಂಟ್ರಿಂಗ್ ಕೆಲಸ ಮಾಡ್ತಿದ್ದ, ರಾಮಮೂರ್ತಿ ನಗರದಲ್ಲೇ ವಾಸ ಮಾಡ್ತಿದ್ದ ಅನ್ನೊದು ಗೊತ್ತಾಗಿತ್ತು. ಇನ್ನು ಠಾಣೆಯಲ್ಲಿ ಈ ಬಗ್ಗೆ ದೂರು ನೀಡುವಂತೆ ಪೊಲೀಸರು ಕೇಳಿದಾಗ ಸಂಜಯ್ ಬೇಡ ಎಂದಿದ್ದನಂತೆ ಜೊತೆಗೆ ಠಾಣೆಯಿಂದ ನಡೆದುಕೊಂಡೆ ಹೋಗಿದ್ದಾನೆ. ಇದಕ್ಕೆ ಸಿಸಿಟಿವಿ ಕೂಡ ಸಾಕ್ಷಿಯಿದೆ.
ಘಟನೆ ನಡೆದ ಮರುದಿನ ಕೆ.ಆರ್ ಪುರ ಪೊಲೀಸ್ ಠಾಣೆ ಬಳಿಯ ಐಟಿಐ ಕಾಂಪೌಂಡ್ ಸಂಜಯ್ ಶವ ಪತ್ತೆಯಾಗಿದೆ. ಕೆ ಆರ್ ಪುರ ಪೊಲೀಸ್ರು ತನಿಖೆ ಮಾಡಿ ಇವನ ಸಾವಿಗೆ ಹಲ್ಲೆ ಕಾರಣ ಅಂತ ಗೊತ್ತಾಗಿದೆ. ಸದ್ಯ ಕೊಲೆ ಕೇಸ್ ದಾಖಲು ಮಾಡಿರುವ ಕೆ.ಆರ್ ಪುರ ಪೊಲೀಸರು ಘಟನೆ ಸಂಬಂಧ ಪಾರ್ತಿಭನ್, ಸೈಯದ್ ಖಾಜ, ಫಯಾಜ್ ಪಾಷಾ ಸೇರಿ ಮೂವರನ್ನು ಅರೆಸ್ಟ್ ಮಾಡಿದ್ದು ಹೆಚ್ಚಿನ ತನಿಖೆ ನಡೆಸುತಿದ್ದಾರೆ.
PublicNext
07/10/2022 08:11 pm