ಪ್ರೀತಿಸಿದವಳೇ ತನ್ನ ಸ್ನೇಹಿತರ ಜೊತೆ ಸೇರಿ ಪ್ರಿಯಕರನನ್ನ ಹತ್ಯೆಗೈದಿರುವ ಘಟನೆ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಮೈಕೋ ಲೇಔಟಿನಲ್ಲಿ ನಡೆದಿದೆ. ಡಾ.ವಿಕಾಸ್ ಕೊಲೆಯಾಗಿರುವ ದುರ್ದೈವಿಯಾಗಿದ್ದು, ಪ್ರತಿಭಾ, ಸುಶೀಲ್, ಗೌತಮ್ ಮತ್ತು ಸೂರ್ಯ ಕೊಲೆ ಆರೋಪದಲ್ಲಿ ಬಂಧಿಯಾಗಿದ್ದಾರೆ.
ಉಕ್ರೇನ್‌ನಲ್ಲಿ ವೈದ್ಯಕೀಯ ಶಿಕ್ಷಣ ಮುಗಿಸಿದ್ದ ವಿಕಾಸ್ ಚೆನ್ನೈನಲ್ಲಿ ವೈದ್ಯನಾಗಿ ಕೆಲಸ ಮಾಡಿಕೊಂಡಿದ್ದ. ಪ್ರತಿಭಾ ಹಾಗೂ ವಿಕಾಸ್ ಪರಸ್ಪರ ಪ್ರೀತಿಸಿ ಕಳೆದ ನವೆಂಬರ್‌ನಲ್ಲಿ ಮದುವೆಗೆ ಸಿದ್ದತೆ ನಡೆಸಿದ್ರು. ಈ ನಡುವೆ ಪ್ರತಿಭಾ ಹಾಗೂ ಆಕೆಯ ತಾಯಿಯ ಖಾಸಗಿ ವಿಡಿಯೋಗಳನ್ನ ಸೆರೆಹಿಡಿದಿದ್ದ ವಿಕಾಸ್ ಅವುಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ.
ಈ ವಿಚಾರಕ್ಕೆ ಪ್ರತಿಭಾ ಹಾಗೂ ಆಕೆಯ ಕುಟುಂಬದವರು ವಿಕಾಸ್ ಜೊತೆ ಗಲಾಟೆ ಮಾಡಿಕೊಂಡಿದ್ದರು. ಪ್ರೀತಿಸಿದವನೇ ಮಾಡಿದ ಮೋಸದ ಕುರಿತು ಪ್ರತಿಭಾ ತನ್ನ ಗೆಳೆಯರಾದ ಸುಶೀಲ್, ಗೌತಮ್ ಮತ್ತು ಸೂರ್ಯನ ಬಳಿ ಹೇಳಿಕೊಂಡಿದ್ದಳು. ಮಾತನಾಡುವುದಾಗಿ ಮೂರು ದಿನಗಳ ಹಿಂದೆ ನ್ಯೂ ಮೈಕೋ ಲೇಔಟ್ ಬಳಿ ಕರೆಸಿಕೊಂಡಿದ್ದ ಆರೋಪಿಗಳು ವಿಕಾಸ್ ಮೇಲೆ ಹಲ್ಲೆ ಮಾಡಿದ್ದರು. ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವಿಕಾಸ್ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾನೆ.
ಸದ್ಯ ಪ್ರತಿಭಾ, ಸುಶೀಲ್ ಮತ್ತು ಗೌತಮ್ ಅರೆಸ್ಟ್ ಆಗಿದ್ರೆ ಮತ್ತೊಬ್ಬ ಆರೋಪಿ ಸೂರ್ಯ ತಲೆ ಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸಿದ್ದಾರೆ.
PublicNext
19/09/2022 05:50 pm