ದೊಡ್ಡಬಳ್ಳಾಪುರ: ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ಮಾಡಲಾಗುತ್ತಿದೆ. ಆದರೆ ಈ ಬಾರಿ ರಾಗಿ ಖರೀದಿಗೆ ಮಿತಿ ಹಾಕಲಾಗಿದೆ. ಒಬ್ಬ ರೈತರಿಗೆ ಗರಿಷ್ಠ 20 ಕ್ವಿಂಟಾಲ್ ನಿಗದಿ ಮಾಡಲಾಗಿದೆ. ಆದರೆ ನಮಗೆ ಗರಿಷ್ಠ 50 ಕ್ವಿಂಟಾಲ್ ರಾಗಿ ಮಾರಾಟಕ್ಕೆ ಅವಕಾಶ ನೀಡ ಬೇಕೆಂದು ರೈತರು ಪ್ರತಿಭಟನೆ ನಡೆಸಿ ರಾಗಿ ಖರೀದಿ ಕೇಂದ್ರವನ್ನ ಸ್ಥಗಿತಗೊಳಿಸಿದರು.
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರು ದೊಡ್ಡಬಳ್ಳಾಪುರ ಎಪಿಎಂಸಿ ಅವರಣದಲ್ಲಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ರಾಗಿ ಖರೀದಿ ಕೇಂದ್ರದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲೆಯಲ್ಲಿ ನೀಲಿಗಿರಿಯನ್ನ ತೆರವು ಮಾಡಲಾಗಿದ್ದು ಈ ಜಾಗದಲ್ಲೂ ರಾಗಿಯನ್ನು ಬೆಳೆಯಲಾಗಿದೆ. ಈ ವರ್ಷ ಉತ್ತಮ ಮಳೆಯಿಂದ ಭರ್ಜರಿ ರಾಗಿ ಫಸಲು ಸಹ ಬಂದಿರುವುದು ಈ ವರ್ಷ ರಾಗಿ ಹೆಚ್ಚಾಗಲು ಕಾರಣವಾಗಿದೆ. ಆದರೆ ಸರ್ಕಾರ ರಾಗಿ ಖರೀದಿ ಮಿತಿಯನ್ನ ಹಾಕಿರುವುದು ರೈತರ ಅಕ್ರೋಶಕ್ಕೆ ಕಾರಣವಾಗಿದೆ.
ಎಕರೆ ಜಮೀನಿಗೆ 10 ಕ್ವಿಂಟಾಲ್ ಮತ್ತು ಗರಿಷ್ಠ 20 ಕಿಂಟ್ವಾಲ್ ರಾಗಿಯನ್ನ ಒಬ್ಬ ರೈತನಿಂದ ಖರೀದಿಗೆ ನಿಗದಿ ಮಾಡಿ ಸರ್ಕಾರ ಆದೇಶಿಸಿದೆ, ಉತ್ತಮ ಇಳುವರಿ ಬಂದಾಗಲೇ ಸರ್ಕಾರ ಮಾಡಿರುವ ಆದೇಶ ರೈತರ ಸಿಟ್ಟಿಗೆ ಕಾರಣವಾಗಿದೆ, ಕ್ವಿಂಟಾಲ್ ರಾಗಿಯನ್ನ ರೈತರಿಂದ 3377 ರೂಪಾಯಿಗೆ ಈ ಬಾರಿ ಖರೀದಿ ಮಾಡಲಾಗುತ್ತಿತ್ತು, ಸರ್ಕಾರದ ಬೆಂಬಲ ಬೆಲೆಯಿಂದ ಮಧ್ಯವರ್ತಿಗಳ ಹಾವಳಿ ತಪ್ಪಿದೆ ಮತ್ತು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಹ ಸಿಗುತ್ತಿದೆ, ಆದರೀಗ ರಾಗಿ ಖರೀದಿಗೆ ಮಿತಿ ಮಾಡಿರುವುದು ಮತ್ತೆ ಮಧ್ಯವರ್ತಿಗಳ ಪ್ರವೇಶಕ್ಕೆ ಕಾರಣವಾಗಲಿದೆ. ಹೀಗಾಗಿ ಕಳೆದ ಬಾರಿಯಂತೆ ಗರಿಷ್ಠ 50 ಕ್ವಿಂಟಾಲ್ ರಾಗಿಗೆ ನಿಗದಿ ಮಾಡಬೇಕೆಂದು ಆಗ್ರಹಿಸಿದರು.
ಫ್ರೂಟ್ ತಂತ್ರಾಂಶದಲ್ಲಿ ರೈತರು ರಾಗಿ ಖರೀದಿ ಹೆಸರು ನೋಂದಾಯಿಸುತ್ತಿದ್ದು, ಒಮ್ಮೆ ನೋಂದಣಿಯಾದರೆ ಮತ್ತೆ ತಿದ್ದುಪಡಿ ಮಾಡುವುದು ಕಷ್ಟವೆಂದು ನೋಂದಣಿ ಕಾರ್ಯವನ್ನು ರೈತರು ತಡೆದಿದ್ದಾರೆ. ಮತ್ತು ಪ್ರತಿ ಹೋಬಳಿಗೊಂದು ರಾಗಿ ಖರೀದಿ ಕೇಂದ್ರ ತೆರೆಯುವಂತೆ ಆಗ್ರಹಿಸಿದರು.
Kshetra Samachara
04/01/2022 07:51 am