ಬಾಗಲಕೋಟೆ: ತೋಟಗಾರಿಕೆ ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ತಾಂತ್ರಿಕತೆಯ ಅಭಿವೃದ್ಧಿ ಹಿನ್ನೆಲೆಯಲ್ಲಿ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಇಂದು ಟೆಕ್ನಿಕಲ್ ಪಾಟ್ನರ್ ಆಗಿ ಹೊರ ಹೊಮ್ಮಿದೆ.
ತೋವಿವಿ ಆರಂಭಗೊಂಡಾಗಿನಿಂದಲೂ ತೋಟಗಾರಿಕೆ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.
ಇದುವರೆಗೂ ಅದು ನುಗ್ಗೆಕಾಯಿ, ದ್ರಾಕ್ಷಿ, ದಾಳಿಂಬೆ ಮತ್ತು ಬ್ಯಾಡಗಿ ಮೆಣಸಿನಕಾಯಿ ತಳಿಗಳನ್ನು ಅಭಿವೃದ್ಧಿ ಪಡಿಸಿದ್ದು, ತೋಟಗಾರಿಕೆ ಕ್ಷೇತ್ರದಲ್ಲಿನ ಮಹತ್ತರ ಸಾಧನೆ ಆಗಿದೆ.
ಇವೆಲ್ಲಕ್ಕೂ ಮಿಗಿಲಾಗಿ ಇತ್ತೀಚೆಗೆ ಬಹು ಬೇಡಿಕೆಯ ಆಲುಗಡ್ಡೆ ತಳಿಯ ಬೀಜಗಳನ್ನು ತಾಂತ್ರಿಕವಾಗಿ ಅಭಿವೃದ್ಧಿ ಪಡಿಸಿದೆ. ಆ ಮೂಲಕ ರಾಜ್ಯದ ಆಲುಗಡ್ಡೆ ಬೆಳೆಗಾರರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಬೀಜಗಳನ್ನು ಪೂರೈಸುವಲ್ಲಿ ತೋವಿವಿ ಸಂಶೋಧನೆ ಮತ್ತು ತಾಂತ್ರಿಕತೆಯ ಅಭಿವೃದ್ಧಿಯಲ್ಲಿ ತನ್ನದೇ ಆದ ಮಹತ್ವವನ್ನು ಹೆಚ್ಚಿಸಿಕೊಂಡಿದೆ.
ಈ ಮೊದಲು ರಾಜ್ಯದ ಆಲುಗಡ್ಡೆ ಬೆಳೆಗಾರರು ಪಂಜಾಬ್ ನಿಂದ ಆಲು ಬೀಜಗಳನ್ನು ಖರೀದಿಸಿ ತರುವುದು ಬಹಳ ವೆಚ್ಚದಾಯಕವಾಗಿತ್ತು. ಆದರೆ ತೋವಿವಿ ಆಲುಗಡ್ಡೆ ಬೀಜಗಳನ್ನು ತಾಂತ್ರಿಕವಾಗಿ ಅಭಿವೃದ್ಧಿ ಪಡಿಸಿದ್ದರಿಂದ ಮತ್ತು ರಾಜ್ಯ ಸರ್ಕಾರ ಶೇ. 50ರಷ್ಟು ರಿಯಾಯಿತಿ ಘೋಷಣೆ ಮಾಡಿರುವುದರಿಂದ ರೈತರಿಗೆ ಈಗ ಶೇ. 25 ರ ದರದಲ್ಲಿ ಆಲುಬೀಜಗಳು ಲಭ್ಯವಾಗುತ್ತಿವೆ.
ಆಲು ಬೀಜಗಳ ತಾಂತ್ರಿಕತೆಯ ಅಭಿವೃದ್ಧಿಯಿಂದಾಗಿ ಭಾರತ ಸರ್ಕಾರ ತಾಂತ್ರಿಕತೆಯ ವಿಭಾಗದಲ್ಲಿ ತೋವಿವಿಯನ್ನು ಟೆಕ್ನಿಕಲ್ ಪಾಟ್ನರ್ ಆಗಿ ಗುರುತಿಸಿದೆ. ಪರಿಣಾಮವಾಗಿ ಥೈಲ್ಯಾಂಡ್, ಕೆಮರೂನ್ ದೇಶಗಳೊಟ್ಟಿಗೆ ತೋವಿವಿ ಆಲಗಡ್ಡೆ ಬೀಜಗಳಲ್ಲಿ ಸಂಶೋಧನೆ ಮತ್ತು ತಾಂತ್ರಿಕತೆಯ ಅಭಿವೃದ್ಧಿಗೆ ಜತೆಯಾಗಿ ಕೆಲಸ ಮಾಡಲು ಅನುಕೂವಾಗಿದೆ.
ತೋವಿವಿ ವಿಜ್ಞಾನಿಗಳ ತಂಡ ಕೆಮರೂನ್ ಗೆ ತೆರಳಿ ನಮ್ಮ ತಾಂತ್ರಿಕತೆ ವರ್ಗಾವಣೆ ಮಾಡಿದೆ. ಅಷ್ಟೇ ಅಲ್ಲ ಕೆಮರೂನ್ ದೇಶದ ರೈತರ ತಂಡ ಕೂಡ ತೋವಿವಿಗೆ ಆಗಮಿಸಿ ಆಲುಬೆಳೆ ತಾಂತ್ರಿಕತೆಯ ಮಾಹಿತಿ ಪಡೆದಿದೆ ಎನ್ನುವುದನ್ನು ತೋವಿವಿ ಕುಲಪತಿ ಡಾ.ಕೆ.ಎಂ ಇಂದಿರೇಶ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
PublicNext
12/10/2022 10:51 am