ಬಾಗಲಕೋಟೆ: ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಾಪ್ತಿಯ ಸಮುದಾಯಗಳಿಗೆ ಮೀಸಲು ಪ್ರಮಾಣ ಹೆಚ್ಚಿಸಿ ನಿಟ್ಟುಸಿರು ಬಿಡುವ ಮುನ್ನವೇ ಇನ್ನಷ್ಟು ಸಮುದಾಯಗಳು ಮೀಸಲು ಸೌಲಭ್ಯಕ್ಕೆ ಒತ್ತಡ ತಂತ್ರವನ್ನು ಹುರಿಗೊಳಿಸಲಾರಂಭಿಸಿವೆ.
ಈಗಾಗಲೇ ಪಂಚಮಸಾಲಿ ಸಮುದಾಯ ನಿರಂತರ ಹೋರಾಟ ನಡೆಸುತ್ತಿದ್ದರೆ, ಪರಿಶಿಷ್ಟ ಜಾತಿ ಸೌಲಭ್ಯ ನಮಗೆ ಸಾಂವಿಧಾನಿಕವಾಗಿ ಸಿಕ್ಕಿದ್ದರೂ ಸರ್ಕಾರ ಮಾತ್ರ ಸೌಲಭ್ಯ ನೀಡಲು ಹಿಂದೇಟು ಹಾಕುತ್ತಿರುವುದನ್ನು ಖಂಡಿಸಿ ಜಂಗಮ ಸಮುದಾಯ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದೆ.
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಬಳಿಯ ಅಮರೇಶ್ವರ ಮಠದ ನೀಲಕಂಠ ಶ್ರೀಗಳು, ಬಾಬಾಸಾಹೇಬ್ ಅಂಬೇಡ್ಕರ್ ಸಂವಿಧಾನ ಬದ್ಧವಾಗಿ ನೀಡಿರುವ ಪರಿಶಿಷ್ಟ ಜಾತಿ ಮೀಸಲು ಸೌಲಭ್ಯ ಕೊಡಲು ನಿಮಗೇನು ಕಷ್ಟ?ಎಂದು ಪ್ರಶ್ನಿಸಿದ್ದಾರೆ. ಅಷ್ಟೆ ಅಲ್ಲದೆ ಜಂಗಮ ಸಮುದಾಯಕ್ಕೆ ಸವಿಧಾನಿಕವಾಗಿ ಸಿಗಬೇಕಿರುವ ಸೌಲಭ್ಯ ಕೊಡದೆ ಹೋದಲ್ಲಿ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿವ ಎಚ್ಚರಿಕೆ ನೀಡಿದ್ದಾರೆ.
ಏತನ್ಮಧ್ಯೆ ನೇಕಾರ ಸಮುದಾಯ ಕೂಡಾ ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದ ನೇಕಾರರಿಗೆ ಮೀಸಲು ಸೌಲಭ್ಯ ಕೊಡುವಂತೆ ಬಾಗಲಕೋಟೆ ಜಿಲ್ಲೆಯಲ್ಲಿ ಧ್ವನಿ ಎತ್ತಿದ್ದಾರೆ. ನೇಕಾರ ಮುಖಂಡರು ನಮಗೆ ನ್ಯಾಯ ಸಿಗದಿದ್ದರೆ ಬೀದಿಗಿಳಿದು ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಒಕ್ಕಲಿಗರು ಕೂಡಾ ಹೆಚ್ಚಿನ ಮೀಸಲು ಕೇಳುತ್ತಿದ್ದಾರೆ.
ರಾಜ್ಯ ಸರ್ಕಾರದ ಪಾಲಿಗೆ ನುಂಗಲಾರದ ತುತ್ತಾಗಿದ್ದ ಎಸ್ಸಿ ಮತ್ತು ಎಸ್ಟಿ ಮೀಸಲು ಸೌಲಭ್ಯ ಹೆಚ್ಚಳದ ಬೆನ್ನಲ್ಲೇ ಇತರ ಕೆಲ ಸಮುದಾಯಗಳು ಮೀಸಲಿಗೆ ಒತ್ತಾಸುತ್ತಿರುವುದು ಬೆಂಕಿಯಿಂದ ಬಾನಲೆಗೆ ಬಿದ್ದ ಸ್ಥಿತಿ ನಿರ್ಮಾವಾಣಗಿದೆ. ಪಂಚಮಸಾಲಿ ಸಮುದಾಯ, ನೇಕಾರ ಸಮುದಾಯ, ಜಂಗಮ ಸಮುದಾಯ, ಒಕ್ಕಲಿಗ ಸಮುದಾಯಗಳನ್ನು ಸರ್ಕಾರ ಹಗುರವಾಗಿ ಪರಿಗಣಿಸಲು ಆಗದು. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಏನೋ ಮಾಡಲು ಹೋಗಿ ಇನ್ನೆನೋ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಸಿಲುಕಿತು ಎನ್ನುವ ವೇದನೆ ಆರಂಭಗೊಂಡಿದೆ. ಇದು ವಿಧಾನಸಭೆ ಚುನಾವಣೆ ಹೊತ್ತಿಗೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎನ್ನುವುದು ಕುತೂಹಲದ ಸಂಗತಿ ಆಗಿದೆ.
PublicNext
11/10/2022 08:30 pm