ಬಾಗಲಕೋಟೆ: ಸೊಳ್ಳೆಯ ಕಡಿತದಿಂದ ಹರಡುವ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗಿ, ಚಿಕುಂಗುನ್ಯಾ ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳುವ ಮೂಲಕ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಜಿಪಂ. ಸಿಇಒ ಟಿ.ಭೂಬಾಲನ್ ಹೇಳಿದರು.
ಜಿಲ್ಲಾ ಪಂಚಾಯತ ಸಭಾಭನದಲ್ಲಿ ಗುರುವಾರ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸೊಳ್ಳೆ ಉತ್ಪತ್ತಿ ಯಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಕ್ರಮವಹಿಸಬೇಕು. ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ವಿವಿಧ ಇಲಾಖೆಗಳ ಸಹಕಾರ ಪಡೆದುಕೊಳ್ಳಲು ತಿಳಿಸಿದರು.
ಜಿಲ್ಲೆಯಲ್ಲಿ ಕಳೆದ ವರ್ಷ ಹಾಗೂ ಪ್ರಸಕ್ತ ಜನವರಿಯಿಂದ ಇಲ್ಲಿವರೆಗೆ ತಲಾ ಒಂದು ಮಲೇರಿಯಾ ಪ್ರಕರಣ ಕಂಡುಂದಿವೆ. 9 ಆನೆಕಾಲು ರೋಗದ ಪ್ರಕರಣಗಳು ದಾಖಲಾಗಿವೆ. ಮಲೇರಿಯಾ ನಿಯಂತ್ರಣಕ್ಕೆ ಜ್ವರ ಪೀಡಿತ 249386 ರೋಗಿಗಳ ರಕ್ತ ಲೇಪನ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದೆ. ಜಿಲ್ಲೆಯಲ್ಲಿ ಖಚಿತ ಪಟ್ಟ 72 ಡೆಂಗಿ ಮತ್ತು 23 ಚಿಕುಂಗುನ್ಯಾ ಪ್ರಕರಣಗಳು ಕಂಡುಬಂದಿವೆ. ಈ ಭಾಗದ ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಮನೆ ಮನೆ ಭೇಟಿ ನೀಡಿ ನೀರು ಸಂಗ್ರಹಿಸುವ ತೊಟ್ಟಿಗಳನ್ನು ಪರೀಕ್ಷಿಸಿ ಲಾರ್ವಾ ಸಮೀಕ್ಷೆ ಮತ್ತು ಲಾರ್ವಾ ಉತ್ಪತ್ತಿ ತಾಣಗಳನ್ನು ನಿರ್ಮೂಲನೆಗೊಳಿಸುವ ಚಟುವಟಿಕೆಗಳು ನಿರಂತರವಾಗಿ ನಡೆಸಲು ಸೂಚಿಸಿದರು.
ಪ್ರಸಕ್ತ ಮಾಹೆಯಲ್ಲಿಯೂ ಮಳೆಯಾಗುತ್ತಿದ್ದು, ಸೊಳ್ಳೆಗಳ ಉತ್ಪಾದನೆ ಹೆಚ್ಚಾಗಿ ಮಲೇರಿಯಾ, ರೋಗದ ಸೋಂಕು ಹರಡುವ ಸಾದ್ಯತೆ ಹೆಚ್ಚಾಗಿದ್ದು, ಸೊಳ್ಳೆಗಳನ್ನು ನಾಶಮಾಡಲು ಕೀಟನಾಶಕ ಸಿಂಪಡಿಸಿ ದಿನನಿತ್ಯ ಸೊಳ್ಳೆ ಪರದೆಯನ್ನು ಉಪಯೋಗಿಸುವದರಿಂದ ಮಾರಕ ರೋಗಗಳಿಂದ ರಕ್ಷಣೆ ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಆಯ್ದ ಪಂಚಾಯತಿಗಳಲ್ಲಿ ಜನರಲ್ಲಿ ಆರೋಗ್ಯ ಶಿಕ್ಷಣ ನೀಡುವುದು ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಮನವರಿಕೆ ಮೂಡಿಸುವುದು. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಲೇರಿಯಾ, ಡೆಂಗ್ಯೂ, ಚಿಕುಂಗುನ್ಯಾ ರೋಗ ನಿಯಂತ್ರಣಗಳ ಬಗ್ಗೆ ಮಾಹಿತಿ ನೀಡಿ ಅವುಗಳ ಅನುಸರಿಸಲು ಉತ್ತೇಜಿಸುವ ಕೆಲಸವಾಗಬೇಕು ಎಂದರು.
Kshetra Samachara
29/09/2022 05:37 pm