ಬಾಗಲಕೋಟೆ: ಜಿಲ್ಲೆಯಲ್ಲಿ ಅಕ್ಟೋಬರ 9 ರಂದು ಆಚರಿಸಲ್ಪಡುವ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಾಗೂ ಅದ್ಧೂರಿಯಾಗಿ ಆಚರಿಸಲು ಜಿಲ್ಲಾಡಳಿತದಿಂದ ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ತಿಳಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ವಾಲ್ಮೀಕಿ ಜಯಂತಿ ಕಾರ್ಯಕ್ರಮ ಆಚರಣೆ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಅಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದಿಂದ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆ ನಡೆಯಲಿದೆ.
ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾಂತಡಗಳು ಭಾಗವಹಿಸಿಲಿದ್ದು, ತಂಡಗಳನ್ನು ಆಹ್ವಾನಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಅವರಿಗೆ ತಿಳಿಸಿದರು. ವಾಲ್ಮೀಕಿ ಅವರ ಕುರಿತು ಉಪನ್ಯಾಸ ನೀಡಲು ಉತ್ತಮ ಉಪನ್ಯಾಸಕರನ್ನು ಆಹ್ವಾನಿಸಲು ತಿಳಿಸಿದರು.
ವೇದಿಕೆ ಕಾರ್ಯಕ್ರಮ ನವನಗರದ ಕಲಾಭವನದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು, ವೇದಿಕೆ ಸಿದ್ದತೆಗೆ ಕ್ರಮವಹಿಸಲು ತಿಳಿಸಿದರು. ಶಿಷ್ಠಾಚಾರ ಪ್ರಕಾರ ಆಮಂತ್ರಣ ಪತ್ರಿಕೆ ಮುದ್ರಣ ಹಾಗೂ ವಿತರಣೆ, ಕಾನೂನು ವ್ಯವಸ್ಥೆ ಕಾಪಾಡಲು ಪೊಲೀಸ್ ವ್ಯವಸ್ಥೆ ಮಾಡಲಾಗುತ್ತದೆ. ಜಿಲ್ಲೆಯ ಎಲ್ಲ ತಾಲೂಕಾ ಕೇಂದ್ರಗಳಲ್ಲಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ನಿರ್ದೇಶನ ನೀಡಲಾಗುವುದು. ಅಲ್ಲದೇ ಎಲ್ಲ ಸರಕಾರಿ ಕಚೇರಿ, ಶಾಲೆ, ಗ್ರಾಮ ಪಂಚಾಯತಿಗಳಲ್ಲಿ ವಾಲ್ಮೀಕಿ ಜಯಂತಿ ಆಚರಣೆ ನಿರ್ದೇಶನ ನೀಡಲಾಗುವುದೆಂದು ತಿಳಿಸಿದರು.
ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ದ್ವಿತೀಯ ವರ್ಷದಲ್ಲಿ ಅತೀ ಹೆಚ್ಚು ಅಂಕ ಪಡೆದು ಜಿಲ್ಲೆಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತದೆ ಎಂದರು.
Kshetra Samachara
22/09/2022 03:38 pm