ಬಾಗಲಕೋಟೆ: ಕನ್ನಡ ಭಾಷೆಯ ಜನಸಾಮಾನ್ಯರು ಬಳಸುವ ಪರಿಯೇ ನುಡಿಜಾತ್ರೆಯಾಗಿದೆ. ಭಾಷಾ ಬಳಕೆಯಲ್ಲಿ ಮುಕ್ತತೆ, ಖಚಿತತೆ ಹಾಗೂ ನಿಯಮಿತತೆ ಇದ್ದರೆ ಮಾತ್ರ ನುಡಿ ಸೊಗಡು ನೂರ್ಮಡಿಗೊಳ್ಳುವುದು. ಸಾಹಿತ್ಯಕ ಸೌರಭ ಈ ಪ್ರದೇಶದಲ್ಲಿ ಹಾಸುಹೊಕ್ಕಾಗಿ ಎಲ್ಲೆಡೆ ಪಸರಿಸಿದೆ. ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಶುದ್ಧ ಕನ್ನಡದ ಆಸ್ಮಿತೆ ಪ್ರಬುದ್ಧ ಕನ್ನಡಪದಗಳ ಬಳಕೆಯ ಈ ಗಂಡುಮೆಟ್ಟಿನ ಉತ್ತರ ಕರ್ನಾಟಕದಲ್ಲಿರುವ ಪ್ರಾಚೀನ ಆಸ್ತಿಯಾಗಿದೆ ಎಂದು ಖ್ಯಾತ ಸಾಹಿತಿ ಮತ್ತು ನುಡಿ ಸಡಗರದ ಸವಾಧ್ಯಕ್ಷ ಡಾ.ಎಚ್.ಎಸ್. ವೆಂಕಟೇಶ ಮೂರ್ತಿ ನುಡಿದರು.
ತಾಲೂಕಿನ ಯಲ್ಲಟ್ಟಿ ಗ್ರಾಮದ ಕೊಣ್ಣೂರ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಜರುಗಿದ ಕೊಣ್ಣೂರ ನುಡಿಸಡಗರದ ಲಿಂ.ಮಲ್ಲಪ್ಪ ಕೊಣ್ಣೂರ ವೇದಿಕೆಯಲ್ಲಿ ಮಾತನಾಡಿದ ಅವರು, ಕವಿ ಹೋದ ಮೇಲೆ ಕವನವೇ ಆತನ ನಾಲಿಗೆ. ಕವಿ ಇಲ್ಲದಿದ್ದರೂ ಆತನ ಕಾವ್ಯ ರಚನೆ ಅಜರಾಮರವಾಗಿರುತ್ತದೆ. ಭಾಷೆಯನ್ನು ಸಶಕ್ತವಾಗಿ ಮತ್ತು ನಿರಂತರವಾಗಿ ಬಳಸುವ ಮೂಲಕ ಭಾಷೆಯನ್ನು ಬದುಕಿಸುವ ಜೊತೆಗೆ ಅವಿರತವಾಗಿ ಅದನ್ನು ಶ್ರೀಮಂತಗೊಳಿಸುವ ಪ್ರಕ್ರಿಯೆ ನಡೆದರೆ ಮಾತ್ರ ಕನ್ನಡ ಚಿರಂತರ ಬೆಳೆಯಬಕಾಯಕವಾಗಿರಬೇಕು ಎಂದರು.
ಉದ್ಘಾಟನಾಪರ ಮಾತುಗಳನ್ನಾಡಿದ ನಾಡೋಜ ಜಗದೀಶ ಗುಡಗುಂಟಿ, ಯಾವುದೇ ಉತ್ಪಾದನಾ ವಸ್ತು ಕೆಟ್ಟರೆ ಅದನ್ನು ಪುನರ್‌ಬಳಸಿ ನವೀಕರಿಸಬಹುದು. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಒಮ್ಮೆ ಯಾವುದೇ ದೋಷವುಂಟಾದಲ್ಲಿ ಅದರ ಪರಿಣಾಮ ಒಂದು ಪೀಳಿಗೆಯೇ ಹಾಳಾಗುತ್ತದೆ ಅಲ್ಲದೇ ಇಡೀ ಸಮಾಜವೇ ಅದರ ಪರಿಣಾಮ ಎದುರಿಸಬೇಕಾಗುತ್ತದೆ. ನಮ್ಮಲ್ಲಿ ಅಧ್ಯನ ಗುಣ ಬೆಳೆಸಿಕೊಂಡಲ್ಲಿ ನಮ್ಮ ಜ್ಞಾನ ಪರಿದಿಯನ್ನು ವಿಸ್ತರಿಸುತ್ತದೆ. ಅಧ್ಯಯನವೇ ನಮ್ಮ ಕಾಯಕವಾಗಿರಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವಾಧ್ಯಕ್ಷೆ ದೀಪಾ ಕೊಣ್ಣೂರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿದ್ದು ಕೊಣ್ಣೂರ, ಡಾ.ಮಹಾವೀರ ದಾನಿಗೊಂಡ, ಮಲ್ಲಿಕಾರ್ಜುನ ನಾಶಿ, ಧರೆಪ್ಪ ಉಳ್ಳಾಗಡ್ಡಿ, ಎನ್.ಎಸ್.ದೇವರವರ, ಬಿ.ಡಿ.ಭದ್ರನ್ನವರ ಇದ್ದರು.
PublicNext
20/09/2022 08:23 pm