ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ನಿರ್ಮಾತೃ ಕೆಂಪೇಗೌಡ ಮಹಾರಾಜರ ರೋಚಕ ಇತಿಹಾಸ-ನಾಡಪ್ರಭು ಕೆಂಪೇಗೌಡರ 513ನೇ ಜಯಂತಿ ಪ್ರಯುಕ್ತ

ವಿಶೇಷ ಲೇಖನ ---ಪ್ರವೀಣ್ ನಾರಾಯಣ ರಾವ್

ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ ರ ಇತಿಹಾಸ ಅತ್ಯಂತ ರೋಚಕವಾದ ಮತ್ತು ಅಧ್ಯಯನಯೋಗ್ಯವಾದ ಇತಿಹಾಸವಾಗಿದೆ.. ಅದರಲ್ಲೂ 500 ವರ್ಷಗಳ ಹಿಂದೆಯೇ ಬೆಂಗಳೂರು ಮಹಾನಗರ ನಿರ್ಮಾಣಕ್ಕೆ ಅವರು ರೂಪಿಸಿದ ಕಾರ್ಯಶೈಲಿ ಏನಿದ್ಯಲ್ಲಾ ಅದು ಎಂತವರನ್ನೂ ನಿಬ್ಬೆರಗಾಗುವಂತೆ ಮಾಡುತ್ತದೆ..ಅವರ ದೂರದೃಷ್ಟಿ,ಆಡಾಳಿತ ವೈಖರಿ, ಧರ್ಮನಿಷ್ಟೆ, ಜನಾನುರಾಗಿ ವ್ಯಕ್ತಿತ್ವ, ಸರ್ವಜನರನ್ನೂ ಸಮಾನವಾಗಿ ಕಾಣುವ ಪ್ರಜಾಪಾಲನೆ ವಿಶ್ವ ಮಾನ್ಯವಾಗಿದೆ. ಕೆಂಪೇಗೌಡಅವರು ವಿಜಯನಗರ ಅರಸರ ಸಾಮಂತರಾಗಿದ್ದ ಕೆಂಪ ನಂಜೇಗೌಡ ಮತ್ತು ಲಿಂಗಮಾಂಬೆ ದಂಪತಿಯ ಮಗನಾಗಿ 1510ರಲ್ಲಿ ಜನಿಸುತ್ತಾರೆ. ಕೆಂಪನಂಜೇಗೌಡರ ನಾಲ್ವರು ಮಕ್ಕಳಲ್ಲಿ (ಕೆಂಪೇಗೌಡ, ವೀರಗೌಡ, ಬಸವಯ್ಯ ಮತ್ತು ಕೆಂಪಸೋಮಯ್ಯ) ಅವರು ಮೊದಲ ಪುತ್ರ. ಕೆಂಪೇಗೌಡರನ್ನು ಕೆಂಪ, ಕೆಂಪರಾಯ, ಕೆಂಪಯ್ಯ, ಕೆಂಪಣ್ಣ ಎಂಬ ಹೆಸರುಗಳಿಂದ ಕರೆಯುತ್ತಿದ್ದರು. ಬಾಲ್ಯದಲ್ಲಿ ಚುರುಕಾಗಿದ್ದ ಕೆಂಪರಾಯನಿಗೆ ಅರಮನೆಯ ಪುರೋಹಿತರ ಹಿತಚಿಂತಕರೂ ಆಗಿದ್ದ ಐಗಂಡಪುರ ಮಾಧವಭಟ್ಟರ ಗುರುಕುಲಾಶ್ರಮದಲ್ಲಿ ಸಾಮಾನ್ಯ ವಿದ್ಯಾರ್ಥಿಯಂತೆ ಶಿಕ್ಷಣ ಕೊಡಿಸಲಾಗಿತ್ತು.

ವಿಜಯನಗರದ ವೈಭವ ಕಂಡು ಬೆಂಗಳೂರು ಕಟ್ಟಿದ್ದರು ಕೆಂಪೇಗೌಡ್ರು

ಬಾಲ್ಯದಿಂದ ಶ್ರೀಕೃಷ್ಣ ದೇವರಾಯನ ಆಡಳಿತ ಮತ್ತು ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಸಿರಿಯನ್ನು ಕಣ್ಣಾರೆ ಕಂಡಿದ್ದ ಕೆಂಪೇಗೌಡ, ತಮ್ಮ ನಾಡಿನಲ್ಲಿಯೂ ಇದೇ ರೀತಿಯಲ್ಲಿ ಎಲ್ಲ ವೈಭವವುಳ್ಳ ನಗರವನ್ನು ಪ್ರತಿಷ್ಠಾಪಿಸಬೇಕು ಎಂಬ ಬಯಕೆ ಹೊಂದಿರುತ್ತಾರೆ. ಬಳಿಕ ಹಲವು ಬಾರಿ ಹಂಪಿಗೆ ಭೇಟಿ ಕೊಟ್ಟು ಅಲ್ಲಿನ ಎಲ್ಲ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿ ಅಧ್ಯಯನ ಮಾಡಿರುತ್ತಾರೆ.

ವಿದ್ಯಾಭ್ಯಾಸ ಪೂರ್ಣಗೊಂಡ ಬಳಿಕ ನಾಡಿನಲ್ಲಿ ಸಂಚರಿಸಿ ಲೋಕಾನುಭವ ಪಡೆದ ಅವರು, ಬಳಿಕ ಕೆಂಪೇಗೌಡ ಎಂಬ ಹೆಸರು ಪಡೆದುಕೊಳ್ಳುತ್ತಾರೆ. 1528ರಲ್ಲಿ ಹಳೆ ಬೆಂಗಳೂರಿನ ಸೋದರ ಮಾವನ ಮಗಳು ಚೆನ್ನಾಂಬ ಎಂಬುವರನ್ನು ವಿವಾಹವಾಗುತ್ತಾರೆ. ಇದೇ ಸಂದರ್ಭದಲ್ಲಿ ಅವರಿಗೆ ಯುವರಾಜರಾಗಿ ಪಟ್ಟಾಭಿಷೇಕ ಮಾಡಲಾಗುತ್ತದೆ. ಈ ಶುಭ ಸಮಾರಂಭಕ್ಕೆ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣ ದೇವರಾಯನ ಪ್ರತಿನಿಧಿಗಳಾದ ಚನ್ನಪಟ್ಟಣ, ಶಿರಾ, ಸೋಲೂರು, ಕೆಳದಿ ಮತ್ತು ಚಿತ್ರದುರ್ಗದ ಪಾಳೇಗಾರರು ಆಗಮಿಸಿ ಶುಭ ಕೋರುತ್ತಾರೆ.

ಮುಪ್ಪಿನಲ್ಲಿದ್ದ ತಂದೆ ಕೆಂಪನಂಜೇಗೌಡರು ರಾಜ್ಯವನ್ನಾಳುವ ಎಲ್ಲ ಅರ್ಹತೆಯಿದೆ ಎಂದು ತಿಳಿದು 1531ರಲ್ಲಿ ಕೆಂಪೇಗೌಡರಿಗೆ ಅಧಿಕಾರ ವಹಿಸಿಕೊಡುತ್ತಾರೆ. ವಿಜಯನಗರ ಸಾಮಂತರಾಗಿದ್ದ ಇವರು, ವಿಜಯನಗರ ಮಹಾರಾಜರ ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತಾರೆ. ನಿಷ್ಠೆಯನ್ನು ಮುಂದುವರೆಸಿ ನಂಬಿಕೆ ಉಳಿಸಿಕೊಂಡಿರುತ್ತಾರೆ. ಅಲ್ಲದೆ, ಉಳಿದ ಸಾಮಂತರಂತೆ ಸ್ವತಂತ್ರರಾಗಲು ಒಪ್ಪುವುದಿಲ್ಲ. ನಿಷ್ಠಾವಂತ ಸಾಮಂತರಾಗಿ ಮುಂದುವರೆಯುತ್ತಾರೆ.

ಬಾಲ್ಯದಿಂದ ಶ್ರೀಕೃಷ್ಣ ದೇವರಾಯನ ಆಡಳಿತ ಮತ್ತು ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಸಿರಿಯನ್ನು ಕಣ್ಣಾರೆ ಕಂಡಿದ್ದ ಕೆಂಪೇಗೌಡ, ತಮ್ಮ ನಾಡಿನಲ್ಲಿಯೂ ಇದೇ ರೀತಿಯಲ್ಲಿ ಎಲ್ಲ ವೈಭವವುಳ್ಳ ನಗರವನ್ನು ಪ್ರತಿಷ್ಠಾಪಿಸಬೇಕು ಎಂಬ ಬಯಕೆ ಹೊಂದಿರುತ್ತಾರೆ. ಬಳಿಕ ಹಲವು ಬಾರಿ ಹಂಪಿಗೆ ಭೇಟಿ ಕೊಟ್ಟು ಅಲ್ಲಿನ ಎಲ್ಲ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿ ಅಧ್ಯಯನ ಮಾಡಿರುತ್ತಾರೆ. ನವ ನಗರ ನಿರ್ಮಾಣಕ್ಕೆ ಸೂಕ್ತ ಸ್ಥಳವನ್ನು ಹುಡುಕುತ್ತಾ ಅಮಾರ್ಥ್ಯ ವೀರಣ್ಣ ಮತ್ತು ಕೆಲವು ಸೈನಿಕರೊಂದಿಗೆ ಯಲಹಂಕದಿಂದ ದಕ್ಷಿಣಕ್ಕೆ ಹತ್ತು ಮೈಲು ದಾಟಿ ಎತ್ತರದ ಪ್ರದೇಶಕ್ಕೆ ಬರುವ ಕೆಂಪೇಗೌಡರಿಗೆ ಹಸಿರಿನಿಂದ ನಳನಳಿಸುತ್ತಿದ್ದ ಪ್ರದೇಶ ಕಣ್ಣಿಗೆ ಬೀಳುತ್ತದೆ. ಬಳಿಕಜ್ಯೋತಿಷಿಗಳು ಮತ್ತು ಭೂಗರ್ಭ ಶಾಸ್ತ್ರ ಹಾಗೂ ನೀರಾವರಿ ತಜ್ಞರೊಂದಿಗೆ ಪರಿಶೀಲಿಸಿ ಮಾಹಿತಿ ಪಡೆಯುತ್ತಾರೆ. ಹೊಸ ನಗರದ ನಿರ್ಮಾಣದ ಅನುಮತಿಗಾಗಿ ಅಂದಿನ ವಿಜಯನಗರದ ಅರಸರಾಗಿದ್ದ ಅಚ್ಚುತರಾಯರನ್ನು ಭೇಟಿ ಮಾಡುತ್ತಾರೆ. ಇದಕ್ಕೆ ಸಂತಸಗೊಂಡ ಅರಸರು ಗೌಡರ ಕಾರ್ಯಕ್ಕೆ ಶುಭಕೋರಿ ಅಗತ್ಯ ನೆರವನ್ನು ಒದಗಿಸುವುದಾಗಿ ತಿಳಿಸುತ್ತಾರೆ. ಆಸ್ಥಾನದ ಪ್ರಮುಖರೊಂದಿಗೆ ಚರ್ಚೆ ನಡೆಸುವ ಕೆಂಪೇಗೌಡರು ಕೋಟೆ, ಗುಡಿ, ಪೇಟೆ, ಕೆರೆ ಮತ್ತು ಉದ್ಯಾನ ಸೇರಿದಂತೆ ಈ ಐದು ಅಂಗಗಳಿಂದ ಕೂಡಿದ ರಾಜಧಾನಿಯನ್ನು ನಿರ್ಮಿಸಲು ನೀಲನಕ್ಷೆ ಸಿದ್ಧಪಡಿಸುತ್ತಾರೆ.

ನಗರದ ನಿರ್ಮಾಣ ಕಾರ್ಯಕ್ಕೆ 1531ರಲ್ಲಿ ನಾಡಿನ ಪ್ರಮುಖರ ಸಮ್ಮುಖದಲ್ಲಿ ಗುದ್ದಲಿ ಪೂಜೆ ನಡೆಯುತ್ತದೆ. ಅರ್ಚಕರು ನಿರ್ಧರಿಸಿದಂತೆ ಶುಭಕಾಲದಲ್ಲಿ ದೊಡ್ಡಪೇಟೆ ಮತ್ತು ಚಿಕ್ಕಪೇಟೆ ಸಂಧಿಸುವ ಜಾಗದಲ್ಲಿ ನಾಲ್ಕು ಜತೆ ಎತ್ತುಗಳಿಗೆ ನೇಗಿಲು ಕಟ್ಟಿನಿಂತಿರುವ ನಾಲ್ಕು ದಿಕ್ಕುಗಳಿಗೆ ಸಾಗುವಂತೆ ಸೂಚನೆ ನೀಡುತ್ತಾರೆ. ಎತ್ತುಗಳು ನಿಲ್ಲುವ ಜಾಗದವರೆಗೆ ನವನಗರ ನಿರ್ಮಾಣಕ್ಕೆ ನಿರ್ಧಾರ ಮಾಡುತ್ತಾರೆ. ಪೂರ್ವಕ್ಕೆ ಹಲಸೂರು ಹೆಬ್ಬಾಗಿಲು. ಪಶ್ಚಿಮಕ್ಕೆ ಅರಳೇಪೇಟೆ, ಉತ್ತರದಲ್ಲಿ ಯಲಹಂಕ ಹೆಬ್ಬಾಗಿಲು. ದಕ್ಷಿಣದಲ್ಲಿ ಆನೇಕಲ್‌ ಅಂದರೆ, ಈಗಿನ ಸಿಟಿ ಮಾರುಕಟ್ಟೆಯ ಬಾಗಿಲವರೆಗೆ ಈ ಎತ್ತುಗಳು ಸಾಗಿ ನಿಲ್ಲುತ್ತವೆ.

ಈ ಜಾಗಗಳಲ್ಲಿ ಪ್ರಮುಖ ಪ್ರವೇಶ ದ್ವಾರ ನಿರ್ಮಾಣಕ್ಕೆ ನಿರ್ಧಾರ ಮಾಡಲಾಗುತ್ತದೆ. ಕೋಟೆಯ ಹೆಬ್ಬಾಗಿಲು ಈಗಿನ ವಿಕ್ಟೋರಿಯಾ ಆಸ್ಪತ್ರೆಯ ಬಳಿ ಇದೆ. ಈ ಕೋಟೆ ನಿರ್ಮಿಸುವಾಗ ಮುಖ್ಯ ಬಾಗಿಲು ನಿಲ್ಲದೆ ಇರುವಾಗ ಸೊಸೆ ಲಕ್ಷ್ಮೀ ದೇವಿ ಆತ್ಮಾರ್ಪಣೆ ಮಾಡಿಕೊಳ್ಳುತ್ತಾರೆ ಎಂಬುದು ಇತಿಹಾಸವಾಗಿದೆ. ರಾಜಧಾನಿಯ ಕೋಟೆ ನಿರ್ಮಾಣದ ಜೊತೆಗೆ ಕೆಂಪೇಗೌಡರು ಸುಮಾರು 64 ನಗರಗಳನ್ನು ನಿರ್ಮಿಸಿದ್ದಾರೆ ಎಂದು ತಿಳಿದು ಬರುತ್ತದೆ. ಅವುಗಳಲ್ಲಿ ಅಕ್ಕಿಪೇಟೆ, ಉಪ್ಪಾರಪೇಟೆ, ದೊಡ್ಡಪೇಟೆ, ಚಿಕ್ಕಪೇಟೆ, ಹಾಗೂ ಬಳೇಪೇಟೆದ ಮುಂತಾದವು. ಇವು ಹಳೆಯ ಬೆಂಗಳೂರಿನಲ್ಲಿ ಈಗಲೂ ಇವೆ.

ತಂದೆಯಂತೆ ಕೆಂಪೇಗೌಡರು ಕೃಷಿ ಮತ್ತು ನಿರಾವರಿ ವಿಚಾರಗಳಲ್ಲಿ ಹೆಚ್ಚು ಆಸಕ್ತಿ ಉಳ್ಳವರಾಗಿದ್ದರು. ರೈತರು ಬೆಳೆದ ಧಾನ್ಯಗಳ ಮಾರಾಟಕ್ಕೆ ಅನೇಕ ಮಾರುಕಟ್ಟೆಗಳನ್ನು ನಿರ್ಮಿಸಿದ್ದರು. ಜೊತೆಗೆ, ಬೆಂಗಳೂರು ಸೇರಿ ನಾಡಿನಲ್ಲಿ ಹಲವು ಕಡೆ ಕೆರೆ, ಕಟ್ಟೆಗಳನ್ನು ನಿರ್ಮಿಸಿದ್ದರು. ಅವುಗಳಲ್ಲಿ ಪ್ರಮುಖವಾದವು ಕೆಂಪಾಂಬುದಿ ಕೆರೆ, ಧರ್ಮಾಂಬುದಿ ಕೆರೆ, ಸಂಪಂಗಿರಾಮ ಕರೆ, ಚೆನ್ನಮ್ಮ ಕೆರೆ, ಹಲಸೂರು ಕೆರೆ, ಸಿದ್ದಿಕಟ್ಟೆಕೆರೆ, ಲಾಲ್‌ಬಾಗ್‌ ಕೆರೆ, ಬೆಣ್ಣಹೊನ್ನಮ್ಮನ ಕೆರೆ ಮುಂತಾದವು.

ಸನಾತನ ಹಿಂದೂ ಸಂಸ್ಕೃತಿ ಉಳಿವಿಗಾಗಿ ಸ್ಥಾಪನೆಯಾಗಿದ್ದ ವಿಜಯನಗರ ಸಾಮ್ರಾಜ್ಯ ಸಾಮಂತರಾಗಿದ್ದ ಕೆಂಪೇಗೌಡರು, ಪೂರ್ವಿಕರಂತೆ ಮಹಾ ದೈವಭಕ್ತರಾಗಿದ್ದರು. ಇವರು ಕಟ್ಟಿಸಿದಂತಹ ದೇವಾಲಯಗಳು ಹಲವು ಇವೆ. ಅವುಗಳಲ್ಲಿ ದೊಡ್ಡ ಬಸವನಗುಡಿ, ಆಂಜನೇಯ ದೇವಾಲಯ, ದೊಡ್ಡ ಗಣಪನ ದೇವಾಲಯ, ಹಲಸೂರಿನ ಶ್ರೀ ಸೋಮೇಶ್ವರ ದೇವಾಲಯ. ನಗರದ ದೇವತೆಯಾದ ಅಣ್ಣಮ್ಮ ದೇವಾಲಯ, ಗವಿಗಂಗಾಧರೇಶ್ವರ ಗುಹಾಂತರ ದೇವಾಲಯ ನಿರ್ಮಿಸಿದ್ದು ಇವರೇ ಆಗಿದ್ದಾರೆ.

ಈಗಿನ ಬಸವನಗುಡಿಯ 11 ಅಡಿಗಳ ಬಸವಣ್ಣನ ವಿಗ್ರಹ ಕೆತ್ತಿಸಿದ್ದು ಇದೇ ಕೆಂಪೇಗೌಡರು. ನಗರದ ಸುರಕ್ಷತೆಯಿಂದ ಬೆಂಗಳೂರು, ಮಾಗಡಿ, ಹುಲಿಯೂರು ದುರ್ಗ ಕೋಟೆ, ಮಾಗಡಿ ಕೋಟೆ ಮತ್ತು ಶಿವಗಂಗೆ ಕೋಟೆ, ರಾಮನಗರದಲ್ಲಿ ರಾಮದುರ್ಗ ಕೋಟೆ ನಿರ್ಮಿಸಿ ಕಾವಲುಗಾರರನ್ನು ನೇಮಿಸಿರುತ್ತಾರೆ. ಲಾಲ್‌ಬಾಗ್‌ ಬಂಡೆ, ಗವಿಗಂಗಾಧರೇಶ್ವರದ ಬಳಿ ಬಂಡಿಮಾಕಾಳಮ್ಮ, ಹಲಸೂರು, ಮೇಖ್ರಿ ವೃತ್ತದ ರಮಣಶ್ರೀ ಉದ್ಯಾನವನ ಗೋಪುರ ಇದೆ.

ವಿಜಯನಗರ ಸಾಮ್ರಾಜ್ಯ ಪತನ ನಂತರ ಯಲಹಂಕ ನಾಡಿನ ಮೇಲೆ ಶತ್ರುಗಳು ದಂಡೆತ್ತಿ ಬರಬಹುದು ಎಂಬುದನ್ನು ತಿಳಿದು, ಸುತ್ತಲಿನ ಕೋಟೆಗಳಲ್ಲಿ ಪಹರೆ ಬಿಗಿಗೊಳಿಸುತ್ತಾರೆ. 1569ರಲ್ಲಿ ಕುಣಿಗಲ್‌ನಿಂದ ಬರುವಾಗ ಮಾಗಡಿ ಬಳಿಯ ಕೆಂಪಾಪುರ ಎಂಬಲ್ಲಿ ನಡೆದ ಜಗಳದಲ್ಲಿ ಕೆಂಪೇಗೌಡರು ಮೃತರಾಗುತ್ತಾರೆ ಎಂಬ ಇತಿಹಾಸವಿದೆ. ಕೆಂಪೇಗೌಡರ ಸಮಾಧಿ ಕೆಂಪಾಪುರದಲ್ಲಿ ಇದೆ ಎಂದು ಇತಿಹಾಸ ಸಂಶೋಧಕರು ಗುರುತಿಸಿದ್ದಾರೆ. ಇವರ ಬಳಿಕ ಮಗ ಗಿಡ್ಡೇಗೌಡ 1578ರವರೆಗೆ ಆಳಿದನು ಎಂದು ಹೇಳಲಾಗುತ್ತದೆ. ಬೆಂಗಳೂರಿನ ಜನರ ಹೃದಯ ಸಿಂಹಾಸನದಲ್ಲಿ ರಾರಾಜಿಸುತ್ತಿದ್ದಾರೆ. ಇಂದು ವಿಶ್ವ ಮಾನ್ಯತೆ ಪಡೆದಿದ್ದಾರೆ.

Edited By :
PublicNext

PublicNext

27/06/2022 11:34 am

Cinque Terre

20.84 K

Cinque Terre

0