ಸ್ನೇಹಿತರೇ, ಕಾಡಿನಲ್ಲಿರುವ ಹುಲಿಯನ್ನು ನೀವು ನೋಡಿದ್ದೀರಿ ಮತ್ತು ಅವುಗಳ ಬಗ್ಗೆ ಕೇಳಿದ್ದೀರಿ, ಆದರೆ ನದಿಯಲ್ಲಿರುವ ಹುಲಿಯ ಬಗ್ಗೆ ನೀವು ಕೇಳಿದ್ದೀರಾ.... ನೀವು ನೋಡಿದ್ದಿರಾ..? ಆಶ್ಚರ್ಯವಾಗುತ್ತಿದೆ ಅಲ್ಲವೇ..?
ಹೌದು ಸ್ನೇಹಿತರೇ, ನಮ್ಮ ಭಾರತದ ಅತಿ ಉದ್ದವಾದ ನದಿ. ಗಂಗಾ ನದಿಯಲ್ಲಿ ವಾಸಿಸುತ್ತಿರುವ ಡಾಲ್ಫಿನ್‌ನನ್ನು "ಗಂಗಾ ನದಿಯ ಹುಲಿ" ಎಂದು ಕರೆಯುತ್ತಾರೆ. ಹಾಗಾದರೇ ನಾನು ಇವತ್ತು ನಿಮಗೆ ಈ ಗಂಗಾ ನದಿಯ ಡಾಲ್ಫಿನ್ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಸುತ್ತೇನೆ.. ಬನ್ನಿ..
ಸ್ನೇಹಿತರೇ, ಗಂಗಾ ನದಿಯ ಡಾಲ್ಫಿನ್ (Ganges River Dolphin) ಅನ್ನು "ಗಂಗಾ ನದಿಯ ಹುಲಿ" ಎಂದು ಕರೆಯಲಾಗುತ್ತದೆ,
ಏಕೆಂದರೆ ಇದು ಕಾಡಿನಲ್ಲಿರುವ ಹುಲಿಯಂತೆ ಗಂಗಾ ನದಿಯಲ್ಲಿ ಅಗ್ರಪರಭಕ್ಷಕವಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಇದು ಗಂಗಾ
ನದಿಯ ಪರಿಸರ ವ್ಯವಸ್ಥೆಯ ಸೂಚಕ ಪ್ರಾಣಿಯಾಗಿದೆ. ಗಂಗಾ ನದಿ ಡಾಲ್ಫಿನ್‌ನನ್ನು (ಪ್ಲಾಟಾನಿಸ್ಟಾ ಗ್ಯಾಂಟಿಕಾ) ಸಾಮಾನ್ಯವಾಗಿ "ಸುಸು" ಎಂದು ಕರೆಯಲಾಗುತ್ತದೆ ಮತ್ತು ಇದು ಭಾರತೀಯ ಉಪಖಂಡಕ್ಕೆ ಸ್ಥಳೀಯವಾಗಿದೆ.
ಗಂಗಾ ನದಿ ಡಾಲ್ಫಿನ್‌ನನ್ನು ಭಾರತದ ಗಂಗಾ-ಬ್ರಹ್ಮಪುತ್ರ-ಮೇಘನಾ ನದಿಗಳಲ್ಲಿ ಮತ್ತು ನೇಪಾಳದಲ್ಲಿನ ಸಂಗು-ಕರ್ಣಫುಲಿ ನದಿಯಲ್ಲಿ
ಸರಿಸುಮಾರು 10,000 ಕಿ.ಮೀ ನಷ್ಟು ಉದ್ದಕ್ಕೂ ಕಾಣಬಹುದಾಗಿದೆ. ಗಂಗಾ ನದಿಯ ಡಾಲ್ಫಿನ್‌ಗಳು ಸಾಮಾನ್ಯವಾಗಿ ನದಿಯ ಆಳವಾದ ಭಾಗಗಳಲ್ಲಿ ಕಂಡುಬರುತ್ತವೆ ಮತ್ತು ಇವು ದ್ವೀಪಗಳು, ನದಿ ತಿರುವುಗಳು ಮತ್ತು ಸಂಗಮಗಳ ಸುತ್ತ ಸುಳಿಗಳಿಗೆ ಆದ್ಯತೆ ನೀಡುತ್ತವೆ ಆದರೆ ಈಗ ಅಣೆಕಟ್ಟುಗಳು ಮತ್ತು ಬ್ಯಾರೇಜ್‌ಗಳು ಡಾಲ್ಫಿನ್ ಚಲನೆಯನ್ನು ನಿರ್ಬಂಧಿಸುತ್ತಿವೆ.
ಗಂಗಾ ನದಿಯ ಡಾಲ್ಫಿನ್ ಸಾಮಾನ್ಯವಾಗಿ ಬೂದು ಅಥವಾ ತಿಳಿ ಕಂದು ಬಣ್ಣವನ್ನು ಹೊಂದಿರುತ್ತದೆ ಆದರೆ ಹೊಟ್ಟೆಗೆ ಗುಲಾಬಿ
ಬಣ್ಣವನ್ನು ಹೊಂದಿರಬಹುದು ಮತ್ತು ಇದು ಉದ್ದವಾದ ತೆಳುವಾದ ಮೂತಿ, ದುಂಡಗಿನ ಹೊಟ್ಟೆ, ಸ್ಥೂಲವಾದ ದೇಹ ಮತ್ತು ದೊಡ್ಡ (ಈಜು ರೆಕ್ಕೆಗಳನ್ನು) ಫ್ಲಿಪ್ಪರ್‌ಗಳನ್ನು ಹೊಂದಿದೆ. ಇದರ ತಲೆಯ ಮೇಲಿರುವ ಬ್ಲೋಹೋಲ್ (ತಲೆಯ ಮೇಲ್ಭಾಗದ ರಂಧ್ರ) ಮೂಗಿನ ಹೊಳ್ಳೆಯಂತೆ ಉಸಿರಾಟದ ಕಾರ್ಯವನ್ನು ನಿರ್ವಹಿಸುತ್ತದೆ. ಈ ಡಾಲ್ಫಿನ್ ಕಡಿದಾದ ಹಣೆ ಮತ್ತು ಹೊಂದಿಕೊಳ್ಳುವ ಕುತ್ತಿಗೆಯನ್ನು ಹೊಂದಿದ್ದು, ಇದು ತಲೆಯನ್ನು ಅಕ್ಕಪಕ್ಕಕ್ಕೆ ತಿರುಗಿಸಲು ಅನುವು ಮಾಡಿಕೊಡುತ್ತದೆ. ಇವು ಉದ್ದವಾದ, ಚೂಪಾದ ಹಲ್ಲುಗಳನ್ನು ಹೊಂದಿದ್ದು, ಬಾಯಿ ಮುಚ್ಚಿದಾಗಲೂ ಈ ಹಲ್ಲುಗಳು ಗೋಚರಿಸುತ್ತವೆ.
ಹೆಣ್ಣುಗಳು ಪುರುಷರಿಗಿಂತ ದೊಡ್ಡದಾಗಿರುತ್ತವೆ. ಹೆಣ್ಣಿನ ದೇಹದ ಉದ್ದ 2.67 ಮೀ ಇದ್ದರೆ ಗಂಡಿನ ದೇಹದ ಉದ್ದ 2-21 ಮೀ
ಇರುತ್ತದೆ. ಇವುಗಳ ದೇಹದ ತೂಕ 149 ಕೆ.ಜಿ ಯಿಂದ 170 ಕೆ.ಜಿಯವರೆಗೆ ಇರುತ್ತದೆ. ಗಂಗಾನದಿಯ ಡಾಲ್ಫಿನ್‌ಗಳು ಸಿಹಿನೀರಿನಲ್ಲಿ ಮಾತ್ರ ಬದುಕಬಲ್ಲವು ಮತ್ತು ಮೂಲಭೂತವಾಗಿ ಕುರುಡಾಗಿರುತ್ತವೆ. ಇವು ಶ್ರವಣಾತೀತ ಪ್ರತಿಬಿಂಬಿತ ಧ್ವನಿಯನ್ನು (ಅಲ್ಟಾçಸಾನಿಕ್ ಎಕೊಲೊಕೆಶನ್ ಶಬ್ದ) ಹೊರಸೂಸುವ ಮೂಲಕ ಮೀನುಗಳನ್ನು ಮತ್ತು ಇತರ ಪ್ರಾಣಿಗಳನ್ನು ಬೇಟೆಯಾಡುತ್ತವೆ. ಇವು ಆಗಾಗ್ಗೆ ಏಕಾಂಗಿಯಾಗಿ ಅಥವಾ ಸಣ್ಣ ಗುಂಪುಗಳಲ್ಲಿ ಕಂಡುಬರುತ್ತವೆ.
ಸಾಮಾನ್ಯವಾಗಿ, ತಾಯಿ ಮತ್ತು ಕರು ಒಟ್ಟಿಗೆ ಪ್ರಯಾಣಿಸುತ್ತವೆ. ಡಾಲ್ಫಿನ್ ಒಂದು ಬದಿಯಲ್ಲಿ ಈಜುವ ವಿಶಿಷ್ಟತೆಯನ್ನು ಹೊಂದಿದೆ, ಇದರಿಂದಾಗಿ ಅದರ ಫ್ಲಿಪ್ಪರ್ (ಈಜುಗೈ) ಮಣ್ಣಿನ ತಳವನ್ನು ಅನುಸರಿಸುತ್ತದೆ. ಈ ನಡವಳಿಕೆಯು ಆಹಾರವನ್ನು
ಹುಡುಕುವಲ್ಲಿ ಅವುಗಳಿಗೆ ಸಹಾಯ ಮಾಡುತ್ತದೆ ಎಂದು ತಿಳಿಯಲಾಗಿದೆ. ಸಸ್ತನಿಯಾಗಿರುವುದರಿಂದ, ಗಂಗಾ ನದಿಯ ಡಾಲ್ಫಿನ್ ನೀರಿನಲ್ಲಿ ಉಸಿರಾಡಲು ಸಾಧ್ಯವಿಲ್ಲ ಮತ್ತು ಪ್ರತಿ 30 ರಿಂದ 120 ಸೆಕೆಂಡ್‌ಗಳಿಗೆ ನೀರಿನಿಂದ ಮೇಲಕ್ಕೆ ಬರಬೇಕು ಮತ್ತು ಕೊನೆಯದಾಗಿ ಇದು 8 ನಿಮಿಷ ಮಾತ್ರನೀರಿನಲ್ಲಿದ್ದು, ಮತ್ತೆ ಉಸಿರಾಡಲು ನೀರಿನಿಂದ ಮೇಲಕ್ಕೆ ಬರುತ್ತದೆ. ಉಸಿರಾಡುವಾಗ ಇದು ಉತ್ಪಾದಿಸುವ ಶಬ್ದದಿಂದಾಗಿ, ಇದನ್ನು ಜನಪ್ರಿಯವಾಗಿ ‘ಸುಸು' ಎಂದು ಕರೆಯುತ್ತಾರೆ.
ಹೆಣ್ಣುಗಳು 10-12 ವರ್ಷ ವಯಸ್ಸಿನಲ್ಲಿ ಲೈಂಗಿಕ ಪ್ರಬುದ್ಧತೆಯನ್ನು ಪಡೆಯುತ್ತವೆ. ಆದರೆ ಪುರುಷರು ಮೊದಲೇ ಪ್ರಬುದ್ಧರಾಗುತ್ತವೆ.
ಗರ್ಭಾವಸ್ಥೆಯ ಅವಧಿಯು 9-11 ತಿಂಗಳುಗಳು ಮತ್ತು ಹೆಣ್ಣು 2-3 ವರ್ಷಗಳಿಗೊಮ್ಮೆ ಕೇವಲ ಒಂದು ಕರುವಿಗೆ ಜನ್ಮ ನೀಡುತ್ತದೆ. ಕರುಗಳು ಹುಟ್ಟುವಾಗ ಚಾಕೊಲೇಟ್ ಕಂದು ಚರ್ಮವನ್ನು ಹೊಂದಿದ್ದರೆ, ವಯಸ್ಕರು ಬೂದು-ಕಂದು ನಯವಾದ, ಕೂದಲುರಹಿತ ಚರ್ಮವನ್ನು ಹೊಂದಿರುತ್ತವೆ. ಇವು 30 ವರ್ಷಗಳ ಕಾಲ ಬದುಕಬಲ್ಲವು. ಭಾರತ ಸರ್ಕಾರವು 5 ಅಕ್ಟೋಬರ್ 2009ರಲ್ಲಿ ಗಂಗಾನದಿಯ ಡಾಲ್ಫಿನ್‌ನನ್ನು ರಾಷ್ಟ್ರೀಯ ಜಲಚರ ಪ್ರಾಣಿ ಎಂದು ಘೋಷಿಸಿತು. ಇದು ಅಸ್ಸಾಂನ ರಾಜ್ಯ ಜಲಚರ ಪ್ರಾಣಿಯೂ ಆಗಿದೆ.
ಗಂಗಾ ನದಿಯ ಡಾಲ್ಪಿನ್ ನದಿಯ ಪರಿಸರ ವ್ಯವಸ್ಥೆಯನ್ನು ಸ್ಥಿರಗೊಳಿಸುವಲ್ಲಿ ಮತ್ತು ನದಿಯ ಶಕ್ತಿಯ ಹರಿವನ್ನು ನಿಯಂತ್ರಿಸುವಲ್ಲಿ ಹಾಗೂ ಮೀನುಗಳನ್ನು ಮತ್ತು ಕಠಿಣಚರ್ಮಿಗಳನ್ನು ನಿರ್ವಹಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್(IUCN)ನಿಂದ ಇದನ್ನು ಅಳಿವಿನಂಚಿನಲ್ಲಿರುವಂತೆ ಪಟ್ಟಿ ಮಾಡಲಾಗಿದೆ. ಇದರ ಪ್ರಾಣಿ ಸಾಂದ್ರತೆ ಇತ್ತೀಚಿನ ವರ್ಷಗಳಲ್ಲಿ ಕ್ಷೀಣಿಸಿದೆ. ಭಾರತ, ನೇಪಾಳ ಮತ್ತು ಬಾಂಗ್ಲಾದೇಶದ ಸುಂದರಬನ್‌ಗಳಲ್ಲಿ ಗಂಗಾ ನದಿಯ ಡಾಲ್ಫಿನ್‌ಗಳ ಸಂಖ್ಯೆಯನ್ನು ಅಂದಾಜು ಮಾಡಲು ಸಮೀಕ್ಷೆಗಳನ್ನು ನಡೆಸಲಾಗಿದೆ. 2021 ರಲ್ಲಿ ಲಭ್ಯವಿರುವ ದತ್ತಾಂಶದ ಆಧಾರದ ಮೇಲೆ ಸರಿಸುಮಾರು 5000 ಡಾಲ್ಫಿನ್‌ಗಳು ಇವೆ ಎಂದು ಅಂದಾಜಿಸಲಾಗಿದೆ.
ಉದ್ದೇಶಪೂರ್ವಕವಲ್ಲದ ಹತ್ಯೆ, ಮೀನುಗಾರಿಕೆ ಮಾಡುವಾಗ ಬಲೆಗೆ ಸಿಕ್ಕಿಕೊಳ್ಳುವುದರಿಂದ ಮತ್ತು ಬೇಟೆಯ ಅತಿಯಾದ ಶೋಷಣೆ, ಡಾಲ್ಫಿನ್‌ನನ್ನು ಎಣ್ಣೆಗಾಗಿ ಬೇಟೆಯಾಡುವುದು. ನೀರಿನ ಯೋಜನೆಗಳಿಂದ ಅವುಗಳ ಆವಾಸಸ್ಥಾನ ನಾಶ, ಮಾಲಿನ್ಯ ಮತ್ತು ಅಣೆಕಟ್ಟುಗಳಿಂದ ಛಿದ್ರಗೊಂಡ ಅವುಗಳ ಸಾಂದ್ರತೆ ಯು ಡಾಲ್ಫಿನ್ ನನ್ನು ನಶಿಸಿಹೊಗುವಂತೆ ಮಾಡುತ್ತಿದೆ.
ವಿಕ್ರಮಶಿಲಾ ಗಂಗೆಟಿಕ್ ಡಾಲ್ಫಿನ್ ವನ್ಯಜೀವಿ ಅಭಯಾರಣ್ಯ ಇದು ಬಿಹಾರ ರಾಜ್ಯದಲ್ಲಿದ್ದು, ಇದು ಭಾರತದ ಏಕೈಕ ಡಾಲ್ಫಿನ್ ಅಭಯಾರಣ್ಯವಾಗಿದೆ. ಪ್ರಾಜೆಕ್ಟ್ ಟೈಗರ್ ಮಾದರಿಯಲ್ಲೇ ಗಂಗಾ ನದಿಯ ಡಾಲ್ಫಿನ್‌ಗಳಿಗೆ ವಿಶೇಷ ಸಂರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಲು “ಪ್ರಾಜೆಕ್ಟ್ ಡಾಲ್ಫಿನ್” ಎಂದು 2021ರಲ್ಲಿ ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಪ್ರಾರಂಭಿಸಿತು.
ಲೇಖಕರು
ನವೀನ.ಪ್ಯಾಟಿಮನಿ
ಚರ್ಮ ಪ್ರಸಾದನ ಕಲಾ ತಜ್ಞರು (ಟ್ಯಾಕ್ಸಿಡರ್ಮಿಸ್ಟ)
ಪ್ರಾಣಿಶಾಸ್ತ್ರ ವಸ್ತುಸಂಗ್ರಹಾಲಯ
ಪ್ರಾಣಿಶಾಸ್ತ್ರ ವಿಭಾಗ,
ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯ, ಧಾರವಾಡ
ಇಮೇಲ್:- naveenpyatimani9901@gmail.com
ಸಂಪರ್ಕ :- 9901208045
PublicNext
12/09/2024 10:55 pm