ಗದಗ : ಹೆಸರು ಕಾಳು ಬೆಳೆದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.ಇನ್ನೇನು ಕಟಾವಿಗೆ ಬಂದ್ದಿದ್ದ ಹೆಸರು ಬೆಳೆ ನಿರಂತರ ಮಳೆಯಿಂದಾಗಿ ನಾಶವಾಗಿದೆ. ಅಲ್ಪಸ್ವಲ್ಪ ಬೆಳೆ ಕಟಾವಾಗಿ ಮಾರುಕಟ್ಟೆಗೆ ಬಂದಿದೆ. ಆದ್ರೆ ಮಾರುಕಟ್ಟೆಯಲ್ಲೂ ಸಹ ಬೆಂಬಲ ಬೆಲೆಗಿಂತ ಬೆಲೆ ಕಡಿಮೆ ಇದ್ದು ಹೆಸರು ಖರೀದಿ ಕೇಂದ್ರ ಆರಂಭಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ.
ಹೌದು..ಕೈಯಲ್ಲಿ ರೋಗ ಅಂಟಿರೋ ಬೆಳೆ ಹಿಡಿದು ತೋರಿಸುತ್ತಿರೋ ರೈತರು...ಹೊಲದಲ್ಲಿ ಬೆಳೆದ ಬಹುತೇಕ ಹೆಸರು ಬೆಳೆಯೆಲ್ಲವೂ ಹಳದಿ ರೋಗಕ್ಕೆ ತುತ್ತಾಗಿರುವದು...ಗದಗ ಜಿಲ್ಲೆಯಾದ್ಯಂತ ಇದೇ ದೃಶ್ಯ ಕಂಡು ಬರುತ್ತಿದೆ.
ಕೃಷಿ ಕಾಯಕವನ್ನೇ ನಂಬಿ ಜೀವನ ನಡೆಸೋ ರೈತ ವರ್ಗಕ್ಕಂತೂ ಪ್ರಕೃತಿ ವಿಕೋಪಗಳು ರೈತರ ಆಶಾಭಾವನೆಯನ್ನೇ ಕಸಿದುಕೊಂಡು ಬಿಡುತ್ತೆ.ಇತ್ತೀಚೆಗೆ ನಿರಂತರ ಸುರಿದ ಮಳೆಗೆ ಗದಗ ತಾಲೂಕಿನ ಸಾವಿರಾರು ಎಕರೆಯಲ್ಲಿ ಬೆಳೆದ ಹೆಸರು ಬೆಳೆ ನಾಶವಾಗಿ ಅಲ್ಪಸ್ವಲ್ಪ ಬೆಳೆ ಕೈಗೆ ಬಂದಿದೆ. ಆದ್ರೆ ಸರಕಾರ ಖರೀದಿ ಕೇಂದ್ರ ತೆರೆಯದ ಹಿನ್ನೆಲೆ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಮಾರುವಂತಾಗಿದೆ.
ಗದಗ ಜಿಲೆಯಾದ್ಯಂತ ಈ ವರ್ಷ 3.17 ಲಕ್ಷ ಹೆಕ್ಟೇರ್ ಹೆಸರು ಬೆಳೆಯುವ ಗುರಿ ಹೊಂದಲಾಗಿತ್ತು. ಆದ್ರೆ ಮಳೆಯಿಂದಾಗಿ ಕೇವಲ 1.20 ಲಕ್ಷ ಹೆಕ್ಟೇರ್ ಮಾತ್ರ ಬೆಳೆಯಲಾಗಿದೆ.ಅಂದಾಜು 79 ಸಾವಿರ ಹೆಕ್ಟೇರ್ ಹೆಸರು ಬೆಳೆ ನಾಶವಾಗಿದೆ.
ಹೆಸರು ಬೆಳೆಗೆ ಹಳದಿ ರೋಗ ಹಾಗೂ ಮಳೆಯಿಂದ ಹಾನಿಗೊಳಗಾದ ಹಿನ್ನಲೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಹೆಸರಿಗೆ 4500 ರೂ.ಗೆ ಮಾರಾಟವಾಗುತ್ತಿದೆ. ಸರಕಾರದ ಬೆಂಬಲ ಬೆಲೆ 7250 ರೂ. ಇರುವುದರಿಂದ ಆದಷ್ಟು ಬೇಗ ಖರೀದಿ ಕೆಂದ್ರ ತೆರೆಯಬೇಕಾಗಿದೆ.
ಒಂದೆಡೆ ಮಳೆ, ಇನ್ನೊಂದೆಡೆ ಬೆಲೆ ಕುಸಿತ, ಮತ್ತೊಂದೆಡೆ ಖರೀದಿ ಕೇಂದ್ರ ಇಲ್ಲವಾದ್ದರಿಂದ ಹೆಸರು ಬೆಳೆದ ರೈತರ ಸ್ಥಿತಿ ತೀರಾ ಸಂಕಷ್ಟಕ್ಕೆ ಸಿಲುಕಿದೆ. ಈ ಬಗ್ಗೆ ಜಿಲ್ಲಾಡಳಿತ ಮುತುವರ್ಜಿ ವಹಿಸಿ ಖರೀದಿ ಕೇಂದ್ರ ಆರಂಭಿಸಿದ್ರೆ ರೈತರಿಗೆ ಒಳಿತಾಗಲಿದೆ.
PublicNext
16/08/2022 09:01 pm