ಗದಗ: ಗದಗ ಜಿಲ್ಲೆಯ ಬಹುತೇಕ ರೈತರು ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬೆಳೆ ಬೆಳೆಯುತ್ತಾರೆ. ಮುಂಗಾರು ಮಳೆ ಚೆನ್ನಾಗಿ ಆಗಿರೋದರಿಂದ ಖುಷಿ ಖುಷಿಯಿಂದ ಅನ್ನದಾತರು ಹೆಸರು ಬಿತ್ತನೆ ಮಾಡಿದ್ರು. ಬೆಳೆ ಕೂಡ ಸಮೃದ್ಧವಾಗಿ ಬಂದಿತ್ತು. ಆದ್ರೆ, ನಿರಂತರ ಮಳೆಯಿಂದಾಗಿ ಹೆಸರು ಬೆಳೆದ ರೈತರು ಕಣ್ಣೀರು ಹಾಕುತ್ತಿದ್ದಾರೆ. ಹೌದು... ಬೆಳೆಗೆ ಹಳದಿ ರೋಗ ವಕ್ಕರಿಸಿದ್ದು, ಅನ್ನದಾತರು ಕಂಗಾಲಾಗಿದ್ದಾರೆ.
ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಹೆಸರು ಬೆಳೆ ಈವಾಗ ಹಳದಿ ಬಣ್ಣಕ್ಕೆ ತಿರುಗಿದೆ. ರೋಗಕ್ಕೆ ತುತ್ತಾದ ಗಿಡಗಳನ್ನು ಕಿತ್ತು ರೈತರು ಆಕ್ರೋಶ ಹೊರಹಾಕಿದ್ದಾರೆ. ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದಲ್ಲಿ ಬೆಳೆದ ಹೆಸರು ಬೆಳೆ ಹಳದಿ ರೋಗಕ್ಕೆ ತುತ್ತಾಗಿದೆ. ಲಕ್ಷ್ಮೇಶ್ವರ ಸೇರಿದಂತೆ ಮುಂಡರಗಿ, ರೋಣ, ನರಗುಂದ ಹೀಗೆ ಜಿಲ್ಲೆಯಾದ್ಯಂತ ಹೆಸರು ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗಿದೆ. ಸಮೃದ್ಧವಾಗಿ ಬೆಳೆದ ಬೆಳೆಯೀಗ ನಂಜಾಣು ರೋಗಕ್ಕೆ ತುತ್ತಾಗಿದೆ.
ರೋಗ ಬಂದ ಕೂಡಲೇ ಔಷಧಿ ಸಿಂಪಡಣೆ ಮಾಡಬೇಕು. ಆದ್ರೆ, ಜಿಟಿಜಿಟಿ ಮಳೆಯಿಂದಾಗಿ ಔಷಧಿ ಸಿಂಪಡಣೆ ಕಷ್ಟವಾಗಿದೆ. ಹೀಗಾಗಿ ರೋಗ ಉಲ್ಭಣಗೊಂಡಿದೆ. ಸಾಲ ಮಾಡಿ ಬೆಳೆದ ಹೆಸರು ಬೆಳೆ ನಾಶವಾಗುತ್ತಿದೆ. ಆದ್ರೂ ಕೃಷಿ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿಲ್ಲ. ಸರ್ವೆ ಮಾಡ್ತಾಯಿಲ್ಲ ಎಂದು ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸರ್ಕಾರ ಬೆಳೆಗೆ ಸೂಕ್ತ ಪರಿಹಾರ ನೀಡಿ ನಮ್ಮನ್ನು ಉಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಗದಗ ಜಿಲ್ಲೆಯಾದ್ಯಂತ ಶೇ.7ರಷ್ಟು ಬೆಳೆ ಹಳದಿ ರೋಗಕ್ಕೆ ತುತ್ತಾಗಿದೆ. ಈ ರೋಗ ಬಿಳಿ ನೊಣದಿಂದ ಬರುತ್ತದೆ. ರೋಗ ಲಕ್ಷಣ ಬಂದ ಕೂಡಲೇ ಕಿತ್ತು ಹಾಕಬೇಕು. ಔಷಧಿ ಸಿಂಪಡಣೆ ಮಾಡಿದ್ರೆ ನಿಯಂತ್ರಣ ಮಾಡಬಹುದು ಅಂತಾರೆ ಕೃಷಿ ಜಂಟಿ ನಿರ್ದೇಶಕರು.
PublicNext
17/07/2022 05:02 pm