ನವದೆಹಲಿ : ಕಳೆದ 11 ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರು ಪ್ರತಿಭನೆ ಮಾಡುತ್ತಿದ್ದಾರೆ.
ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳ ವಿರುದ್ಧ ಸಾವಿರಾರು ರೈತರು ಉಗ್ರ ಹೋರಾಟ ನಡೆಸುತ್ತಿದ್ದು, ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ಮಂಗಳವಾರ ಭಾರತ್ ಬಂದ್ ಗೆ ಕರೆ ನೀಡಿದ್ದು, ಈ ಬಂದ್ ಗೆ ದೇಶದ ಎಲ್ಲಾ ಜನತೆ ಕೈಜೋಡಿಸಬೇಕು ಎಂದು ಅನ್ನದಾತರು ಸೋಮವಾರ ಮನವಿ ಮಾಡಿದ್ದಾರೆ.
ವಿವಾದಾತ್ಮ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ನಾಳೆ ಕರೆ ನೀಡಿರುವ ಭಾರತ್ ಬಂದ್ ಗೆ ರಾಜಕೀಯ ಪಕ್ಷಗಳು ನೀಡಿರುವ ಬೆಂಬಲವನ್ನು ರೈತರು ಸ್ವಾಗತಿಸಿದ್ದಾರೆ.
ಕೇಂದ್ರ ಸರ್ಕಾರ ಈಗಾಗಲೇ ರೈತರೊಂದಿಗೆ ಐದು ಸುತ್ತಿನ ಮಾತುಕತೆ ನಡೆಸಿದರೂ ಅನ್ನದಾತರ ಮನವೊಲಿಸುವಲ್ಲಿ ವಿಫಲವಾಗಿದ್ದು, ಬುಧವಾರ ಆರನೇ ಸುತ್ತಿನ ಮಾತುಕತೆ ಇದೆ.
ಡಿಸೆಂಬರ್ 9 ರಂದು ಮುಂದಿನ ಸುತ್ತಿನ ಸಭೆಗೆ ಬರುವ ಮೊದಲು ಕೇಂದ್ರ ಸರ್ಕಾರ ಕೃಷಿ ಕಾನೂನು ತಿದ್ದುಪಡಿಯ ಹೊಸ ಕರಡನ್ನು ಕಳುಹಿಸುತ್ತದೆ ಎಂದು ರೈತರು ನಿರೀಕ್ಷಿಸಿದ್ದಾರೆ.
ಆದರೆ ಸಭೆಯಲ್ಲಿ ಮಾತ್ರ ಕರಡನಿ ಕುರಿತು ಚರ್ಚಿಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
PublicNext
07/12/2020 03:14 pm